ಕೊವಿಡ್​ನಿಂದ ಇನ್ನೂ ಸಣ್ಣ ಕೈಗಾರಿಕಾ ವಲಯ ಚೇತರಿಸಿಕೊಂಡಿಲ್ಲ. ಈಗ ಮತ್ತೆ ಹೊರೆ ಹಾಕಿದ್ರೆ ಎಂಎಸ್​ಎಂಇ ಚೇತರಿಸಿಕೊಳ್ಳಲು ಹೇಗೆ ಸಾಧ್ಯ? ಈಗಾಗಲೇ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿದೆ. ಇದನ್ನು ರಾಜ್ಯ ಸರ್ಕಾರ ಕೂಡಲೇ ಗಂಭೀರವಾಗಿ ಪರಿಗಣಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಬೆಂಗಳೂರು: ಕರ್ನಾಟಕ ಕಾಂಗ್ರೆಸ್​​ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಗ್ಯಾರಂಟಿ ಅನುಷ್ಠಾನ ಮಾಡಲು ವಿದ್ಯುತ್​ ದರ (Electricity Bill) ಏರಿಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ದೇಶದ ಪ್ರಮುಖ ಬೆನ್ನೆಲುಬು ಸಣ್ಣ ಕೈಗಾರಿಕೆಗಳು. ರಾಜ್ಯ ಸರ್ಕಾರದ ಬಳಿ ಸಂಕಷ್ಟ ಹೇಳಿಕೊಳ್ಳಲು ಸಣ್ಣ ಕೈಗಾರಿಕೆಗಳ ನಿಯೋಗ ಹೋಗಿತ್ತು. ಆದರೆ ಕೈಗಾರಿಕೋದ್ಯಮಿಗಳ ಸಂಕಷ್ಟ ಕೇಳದೆ ಪಾಠ ಮಾಡಿ ಕಳಿಸಿದ್ದಾರೆ ಎಂದು ದೂರಿದ್ದಾರೆ.

ವಿದ್ಯುತ್​ ದರ ಏರಿಕೆ ಬಗ್ಗೆ ಕೆಇಆರ್​ಸಿ ಸ್ವಂತ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಕಾಂಗ್ರೆಸ್​, ಬಿಜೆಪಿ ನಾಯಕರು ಪರಸ್ಪರ ಆರೋಪ ಮಾಡಿಕೊಳ್ತಿದ್ದಾರೆ. ಈಗ ಹಾಲಿನ ದರ ಸಹ 5 ರೂಪಾಯಿ ಜಾಸ್ತಿ ಮಾಡಲು ಹೊರಟಿದ್ದಾರೆ. ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ ಕಡಿತ ಮಾಡಲೂ ಮುಂದಾಗಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊವಿಡ್​ನಿಂದ ಇನ್ನೂ ಸಣ್ಣ ಕೈಗಾರಿಕಾ ವಲಯ ಚೇತರಿಸಿಕೊಂಡಿಲ್ಲ. ಈಗ ಮತ್ತೆ ಹೊರೆ ಹಾಕಿದ್ರೆ ಎಂಎಸ್​ಎಂಇ ಚೇತರಿಸಿಕೊಳ್ಳಲು ಹೇಗೆ ಸಾಧ್ಯ? ಈಗಾಗಲೇ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿದೆ. ಇದನ್ನು ರಾಜ್ಯ ಸರ್ಕಾರ ಕೂಡಲೇ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಬುಧವಾರವಷ್ಟೇ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಚುನಾವಣಾ ತಂತ್ರಜ್ಞರ ಮಾತು ಕೇಳಿಕೊಂಡು ಉಚಿತ ಗ್ಯಾರಂಟಿಗಳನ್ನು ಕಾಂಗ್ರೆಸ್​​ನವರು ಘೋಷಿಸಿದ್ದರು. ಯೋಜನೆ ಜಾರಿಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲಿಲ್ಲ ಎಂದು ಟೀಕಿಸಿದ್ದರು.

Leave a Reply

Your email address will not be published. Required fields are marked *