ಆರಂಭಿಕ ಫಕರ್‌ ಜಮಾನ್‌ ಸಿಡಿಸಿದ ಮಿಂಚಿನ ಶತಕದ ನೆರವಿನಿಂದ ಪಾಕಿಸ್ತಾನ ತಂಡ ಡಕ್‌ ವರ್ತ್‌ ಲೂಯಿಸ್‌ ನಿಯಮದ ಅನ್ವಯ ನ್ಯೂಜಿಲೆಂಡ್‌ ವಿರುದ್ಧ 21 ರನ್‌ ಗಳ ಜಯಭೇರಿ ಬಾರಿಸಿದೆ. ಈ ಮೂಲಕ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡ 50 ಓವರ್‌ ಗಳಲ್ಲಿ 6 ವಿಕೆಟ್‌ ಗೆ 401 ರನ್‌ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಪಾಕಿಸ್ತಾನ ತಂಡ 25.3 ಓವರ್‌ ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 200 ರನ್‌ ಗಳಿಸಿದ್ದಾಗ ಸುರಿದ ಮಳೆ ಪಂದ್ಯ ನಡೆಯದಂತೆ ತಡೆಯೊಡ್ಡಿತು.

ಮಳೆಯಿಂದ ಪಂದ್ಯ ನಿಂತಾಗ ಡಕ್‌ ವರ್ತ್‌ ಲೂಯಿಸ್‌ ನಿಯಮದ ಅನ್ವಯ ಪಾಕಿಸ್ತಾನ 21 ರನ್‌ ಗಳಿಂದ ಮುನ್ನಡೆ ಸಾಧಿಸಿತ್ತು. ಇದರಿಂದ ನ್ಯೂಜಿಲೆಂಡ್‌ ಬೃಹತ್‌ ಮೊತ್ತ ಕಲೆಹಾಕಿಯೂ ಆಘಾತ ಅನುಭವಿಸುವಂತಾಯಿತು.

ಪಾಕಿಸ್ತಾನ ತಂಡ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಆದರೆ ಫಕರ್‌ ಜಮಾನ್‌ 81 ಎಸೆತಗಳಲ್ಲಿ 8 ಬೌಂಡರಿ ಮತ್ತು 11 ಸಿಕ್ಸರ್‌ ನೆರವಿನಿಂದ 126 ರನ್‌ ಸಿಡಿಸಿದರು. ಮತ್ತೊಂದೆಡೆ ನಾಯಕ ಬಾಬರ್‌ ಅಜಮ್‌ 63 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ ಸಹಾಯದಿಂದ 66 ರನ್‌ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ ತಂಡದ ಪರ ಬೆಂಗಳೂರು ಮೂಲದ ರಚಿನ್‌ ರವೀಂದ್ರ ಶತಕ ಸಿಡಿಸಿದರೆ, ನಾಯಕ ಕೇನ್‌ ವಿಲಿಯಮ್ಸನ್‌ 95 ರನ್‌ ಬಾರಿಸಿ ತಂಡ ಬೃಹತ್‌ ಮೊತ್ತ ಪೇರಿಸಲು ನೆರವಾದರು.

ರಚಿನ್‌ ರವೀಂದ್ರ 94 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್‌ ಸಹಾಯದಿಂದ 108 ರನ್‌ ಸಿಡಿಸಿದರೆ, ವಿಲಿಯಮ್ಸನ್‌ 79 ಎಸೆತಗಳಲ್ಲಿ 10 ಬೌಂಡರಿ ಮತ್ತು  2 ಸಿಕ್ಸರ್‌ ಒಳಗೊಂಡ 95 ರನ್‌ ಸಿಡಿಸಿದರು. ನಂತರ ಬಂದ ಗ್ಲೆನ್‌ ಫಿಲಿಪ್ಸ್‌ (41), ಮಾರ್ಕ್‌ ಚಾಂಪನ್‌ (39) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.

Leave a Reply

Your email address will not be published. Required fields are marked *