ODI World Cup 2023: ಉಳಿದ ತಂಡಗಳಿಗೆ ಹೊಲಿಸಿದರೆ, ಭಾರತ ಪ್ರತಿಯೊಂದು ಪಂದ್ಯವನ್ನಾಡಲು ಬೇರೆ ಬೇರೆ ಸ್ಥಳಗಳಲ್ಲಿ ಪ್ರಯಾಣಿಸಬೇಕಿದೆ. ಇದರಿಂದ ರೋಹಿತ್ ಪಡೆಗೆ ಪ್ರಮುಖವಾಗಿ 4 ಸವಾಲುಗಳು ಎದುರಾಗಿವೆ.

ಬರೋಬ್ಬರಿ 10 ವರ್ಷಗಳ ಬಳಿಕ ICC) ಟೂರ್ನಿಯೊಂದು ಮತ್ತೊಮ್ಮ ಭಾರತದ ನೆಲದಲ್ಲಿ ಆಯೋಜನೆಗೊಳ್ಳುತ್ತಿದೆ. ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್ ( world cup 2023)​ ಜೊತೆಗೆ ಭಾರತದ 10 ವರ್ಷಗಳ ಬರ ಕೊನೆಗೊಳ್ಳುವ ಆಸೆಯೂ ಆರಂಭವಾಗಲಿದೆ. ಅಲ್ಲದೆ ಬರೋಬ್ಬರಿ 12 ವರ್ಷಗಳ ಬಳಿಕ ಭಾರತಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಸವಾಲು ಕೂಡ ಎದುರಾಗಿದೆ. ಇದೆಲ್ಲದರ ನಡುವೆ ಐಸಿಸಿ ಪ್ರಕಟಿಸಿರುವ ವೇಳಾಪಟ್ಟಿ ಕೂಡ ಟೀಂ ಇಂಡಿಯಾಕ್ಕೆ (Team India) ಸಾಕಷ್ಟು ಸವಾಲುಗಳನ್ನು ತಂದೊಡ್ಡಿದೆ. ಐಸಿಸಿ ಪ್ರಕಟಿಸಿರುವ ವೇಳಾಪಟ್ಟಿ ಪ್ರಕಾರ ಪಂದ್ಯಾವಳಿಯನ್ನು ಆಯೋಜಿಸಲು 10 ನಗರಗಳನ್ನು ಆಯ್ಕೆ ಮಾಡಲಾಗಿದೆ. ಹತ್ತು ತಂಡಗಳ ಈ ವಿಶ್ವಕಪ್‌ನಲ್ಲಿ ಪ್ರತಿ ತಂಡವು ಲೀಗ್ ಹಂತದಲ್ಲಿ ತಲಾ 9 ಪಂದ್ಯಗಳನ್ನು ಆಡಬೇಕಿದೆ. ಆತಿಥೇಯ ಭಾರತ ಕೂಡ ಇದರಲ್ಲಿ ಸೇರಿದೆ. ಆದರೆ ಉಳಿದ ತಂಡಗಳಿಗೆ ಹೊಲಿಸಿದರೆ, ಭಾರತ ಪ್ರತಿಯೊಂದು ಪಂದ್ಯವನ್ನಾಡಲು ಬೇರೆ ಬೇರೆ ಸ್ಥಳಗಳಲ್ಲಿ ಪ್ರಯಾಣಿಸಬೇಕಿದೆ. ಇದರಿಂದ ರೋಹಿತ್ (Rohit Sharma) ಪಡೆಗೆ ಪ್ರಮುಖವಾಗಿ 4 ಸವಾಲುಗಳು ಎದುರಾಗಿವೆ.

34 ದಿನಗಳಲ್ಲಿ 8400 ಕಿಲೋಮೀಟರ್ ಪ್ರಯಾಣ

ಒಂದು ಅಂದಾಜಿನ ಪ್ರಕಾರ, ಅಕ್ಟೋಬರ್ 8 ರಂದು ತಮ್ಮ ಮೊದಲ ಲೀಗ್ ಪಂದ್ಯದಿಂದ ನವೆಂಬರ್ 11 ರ ಕೊನೆಯ ಲೀಗ್ ಪಂದ್ಯದವರೆಗೆ, ಟೀಂ ಇಂಡಿಯಾ 34 ದಿನಗಳಲ್ಲಿ ವಿಮಾನದಲ್ಲಿ ಸುಮಾರು 8400 ಕಿಮೀ ಪ್ರಯಾಣಿಸಲಿದೆ. ಬೇರೆ ಯಾವುದೇ ತಂಡದ ವೇಳಾಪಟ್ಟಿಗೆ ಹೋಲಿಸಿದರೆ, ಭಾರತ ತಂಡವೇ ಅತಿಹೆಚ್ಚು ದೂರ ಸಂಚರಿಸಲಿದೆ. ದೇಶದ ಹಲವು ನಗರಗಳಲ್ಲಿ ಪಂದ್ಯಗಳು ನಡೆಯುವುದರಿಂದ ಅಭಿಮಾನಿಗಳಿಗೇನೋ ಸಂಭ್ರಮ ತರಲಿದೆ. ಆದರೆ ಆಟಗಾರರು ಒಂದು ಪಂದ್ಯ ಮುಗಿದ ಬೆನ್ನಲ್ಲೇ, ವಿಶ್ರಾಂತಿ ಪಡೆಯಲಾಗದೆ ಇನ್ನೊಂದು ನಗರದತ್ತ ಸಂಚರಿಸಬೇಕಿದೆ.

34 ದಿನಗಳ ಅವಧಿಯಲ್ಲಿ ಲೀಗ್​ ಹಂತದ 9 ಪಂದ್ಯಗಳಿಗಾಗಿ ಟೀಂ ಇಂಡಿಯಾ ಸುದೀರ್ಘ ಪ್ರಯಾಣ ಮಾಡಬೇಕಾಗುತ್ತೆ. ಅತಿ ದೂರದ ಪ್ರಯಾಣ ಅಂದರೆ ಚೆನ್ನೈ ಟು ದೆಹಲಿ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ದೆಹಲಿಯ ಫಿರೋಜ್​ ಷಾ ಕೋಟ್ಲಾ ಸ್ಟೇಡಿಯಂ ತಲುಪಲು 1,761 ಕಿ.ಮೀ ಸಂಚರಿಸಬೇಕು. ಇದಾಗಿ ಮುಂದಿನ ಪಂದ್ಯಕ್ಕೆ ಧರ್ಮಶಾಲಾಗೆ ಬರುವಷ್ಟ್ರಲ್ಲಿ 1,936 ಕಿ.ಮೀ ದೂರ ಕ್ರಮಿಸಿದಂತಾಗುತ್ತೆ. ಇಷ್ಟು ಮಾತ್ರವಲ್ಲದೆ, ಟೀಂ ಇಂಡಿಯಾ ಸೆಮಿಫೈನಲ್​ ಅಥವಾ ಫೈನಲ್ ತಲುಪಿದ್ರೆ ಸುಮಾರು 9,700 ಕಿ.ಮೀ ದೂರ ಕ್ರಮಿಸಬೇಕಿದೆ.

ಪ್ರಯಾಣದ ಆಯಾಸ

ಇದೇಕೆ ಇಷ್ಟು ದೊಡ್ಡ ಸವಾಲು ಎಂಬುದು ಪ್ರಶ್ನೆ. ಇದಕ್ಕೆ ಒಂದು ಕಾರಣ ಟೂರ್ನಿಯ ಗಾತ್ರ. ಟಿ20 ಪಂದ್ಯಾವಳಿಯಾದರೆ, ಒಂದು ಪಂದ್ಯ ಮುಗಿಯಲು ಕೇವಲ 4 ರಿಂದ5 ಗಂಟೆ ತೆಗೆದುಕೊಳ್ಳುತ್ತದೆ. ಆದರೆ ಇದು ತಲಾ 50 ಓವರ್‌ ಪಂದ್ಯಗಳ ವಿಶ್ವಕಪ್. ಅಂದರೆ, ಯಾವುದೇ ಪಂದ್ಯದಲ್ಲಿ ಕನಿಷ್ಠ 9 ಗಂಟೆಗಳ ಕಾಲ ಆಟಗಾರರು ಮೈದಾನದಲ್ಲಿರಬೇಕು. ಇದರ ಹೊರತಾಗಿ ಹೋಟೆಲ್‌ನಿಂದ ಮೈದಾನಕ್ಕೆ ಮತ್ತು ಮೈದಾನದಿಂದ ಹೋಟೆಲ್​ಗೆ ಪ್ರಯಾಣ ಬೆಳೆಸಬೇಕಾಗಿರುವುದರಿಂದ ಆಟಗಾರರಿಗೆ ತುಂಬಾ ಆಯಾಸವಾಗುತ್ತದೆ.

ಪಂದ್ಯಗಳ ನಡುವೆ ಹೆಚ್ಚು ಅಂತರವಿಲ್ಲ

ವೇಳಾಪಟ್ಟಿಯ ಪ್ರಕಾರ ಟೀಂ ಇಂಡಿಯಾ ತನ್ನ ಹೆಚ್ಚಿನ ಪಂದ್ಯಗಳ ನಡುವೆ ಕೇವಲ 2 ಅಥವಾ 3 ದಿನಗಳ ಅಂತರವನ್ನು ಪಡೆಯುತ್ತದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ನಡುವಿನ ಗರಿಷ್ಠ ಅಂತರ ಕೇವಲ 6 ದಿನಗಳು. ಇಂತಹ ಪರಿಸ್ಥಿತಿಯಲ್ಲಿ, ಪಂದ್ಯದ ನಂತರ, ಮೈದಾನದಿಂದ ಹೋಟೆಲ್‌ಗೆ ಪ್ರಯಾಣಿಸಲು, ಕ್ರಿಕೆಟ್ ಕಿಟ್ ಅನ್ನು ಪ್ಯಾಕಿಂಗ್-ಅನ್ಪ್ಯಾಕ್ ಮಾಡುವುದರಿಂದ, ಒಂದು ಸ್ಥಳದಿಂದ ಇನ್ನೊಂದಕ್ಕೆ ಪ್ರಯಾಣಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಆಟಗಾರರಿಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ಸಿಗುವುದಿಲ್ಲ.

ಅಭ್ಯಾಸ ಮಾಡಲು ಸಮಯ ಸಿಗುವುದಿಲ್ಲ

ಪಂದ್ಯಗಳ ನಡುವೆ ಕಡಿಮೆ ಸಮಯವಿದ್ದಾಗ ಆಟಗಾರರು ಬಳಲಿಕೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ಚೇತರಿಸಿಕೊಳ್ಳಲು ವಿಶ್ರಾಂತಿ ತೆಗೆದುಕೊಳ್ಳುವತ್ತ ಗಮನ ಹರಿಸುತ್ತಾರೆ. ಆಗ ಅಭ್ಯಾಸದ ಸಮಯವೂ ಕಡಿಮೆ ಆಗುತ್ತದೆ.ಇದು ತಂಡದ ಸಿದ್ಧತೆಗಳ ಮೇಲೆ ಪರಿಣಾಮ ಬೀರಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೈಹಿಕ ಆಯಾಸ ಮಾತ್ರವಲ್ಲ, ನಿರಂತರ ಆಟ, ಪ್ರದರ್ಶನದ ಒತ್ತಡ ಮತ್ತು ತುಂಬಾ ಪ್ರಯಾಣವು ಮಾನಸಿಕ ಆಯಾಸಕ್ಕೆ ಕಾರಣವಾಗುತ್ತದೆ.

ವಿಭಿನ್ನ ನಗರ, ವಿಭಿನ್ನ ಹವಾಮಾನ, ವಿಭಿನ್ನ ಸನ್ನಿವೇಶಗಳು

ಅಷ್ಟೇ ಅಲ್ಲ, ಭಾರತ ತಂಡವು ಉತ್ತರದ ಧರ್ಮಶಾಲಾದಿಂದ ಪಶ್ಚಿಮದ ಅಹಮದಾಬಾದ್, ದಕ್ಷಿಣದ ಚೆನ್ನೈ ಮತ್ತು ಪೂರ್ವದ ಕೋಲ್ಕತ್ತಾದವರೆಗೆ ಭಾರತದಾದ್ಯಂತ ಪ್ರಯಾಣಿಸಬೇಕಾಗಿದೆ. ಅಕ್ಟೋಬರ್-ನವೆಂಬರ್ ತಿಂಗಳು ಈ ಎಲ್ಲಾ ಸ್ಥಳಗಳ ಹವಾಮಾನ ವಿಭಿನ್ನವಾಗಿರುತ್ತದೆ. ಆ ಸಮಯದಲ್ಲಿ ಒಂದೆಡೆ ಸಾಕಷ್ಟು ಬಿಸಿಲಿದ್ದರೆ, ಇನ್ನೊಂದೆಡೆ ಸಾಕಷ್ಟು ಮಳೆ ಬೀಳುತ್ತಿರುತ್ತದೆ. ಇನ್ನೂ ಕೆಲವೆಡೆ ಚಳಿಗಾಲ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೈದಾನವನ್ನು ಹೊರತುಪಡಿಸಿ, ಆಟಗಾರರಿಗೆ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಂಪೂರ್ಣವಾಗಿ ಹೊಂದಿಕೊಳ್ಳಲು ಸಮಯವೂ ಸಿಗುವುದಿಲ್ಲ.

Leave a Reply

Your email address will not be published. Required fields are marked *