Rohit Sharma Captaincy: ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕನಾಗಲು ಎಂದಿಗೂ ಆಸಕ್ತಿ ಹೊಂದಿರಲಿಲ್ಲ ಎಂದು ಪಿಟಿಐ ವರದಿ ಮಾಡಿದೆ.

Rohit Sharma Captaincy: ಒಲ್ಲದ ಮನಸ್ಸಲ್ಲಿ ಟೆಸ್ಟ್ ನಾಯಕತ್ವ ಒಪ್ಪಿಕೊಂಡಿದ್ದರಂತೆ ರೋಹಿತ್ ಶರ್ಮಾ..!

ರೋಹಿತ್ ಶರ್ಮಾ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಫೈನಲ್‌ನಲ್ಲಿ ಸೋತ ನಂತರ ಟೀಂ ಇಂಡಿಯಾ (Team India) ಹಾಗೂ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ನಿರಂತರವಾಗಿ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ . ಈ ಸೋಲಿನ ನಂತರ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಅವರಂತಹ ಅನುಭವಿಗಳ ಮೇಲೂ ಪ್ರಶ್ನೆಗಳು ಎದ್ದಿವೆ. ಅದರಲ್ಲೂ ತಂಡವನ್ನು ಕಳಪೆಯಾಗಿ ಮುನ್ನಡೆಸಿದ ರೋಹಿತ್ ಶರ್ಮಾ ನಾಯಕತ್ವದ ವಿರುದ್ಧ ಅಪಸ್ವರ ಎದ್ದಿದೆ. ಈ ಸೋಲಿನ ನಂತರ ರೋಹಿತ್ ಟೆಸ್ಟ್ ನಾಯಕರಾಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ನಾಯಕತ್ವದಿಂದ ಈಗಲೇ ತೆಗೆದುಹಾಕುವ ಸಾಧ್ಯತೆಗಳಿಲ್ಲ ಎಂದು ವರದಿಯಾಗಿದೆ. ಆದರೆ ಈ ಮಧ್ಯೆ ಟೆಸ್ಟ್ ನಾಯಕತ್ವದ ಬಗ್ಗೆ ರೋಹಿತ್ ಶರ್ಮಾ ಹೊಂದಿದ್ದ ಅಭಿಪ್ರಾಯದ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಹಿಟ್​ಮ್ಯಾನ್​ಗೆ ಎಂದಿಗೂ ಟೆಸ್ಟ್ ನಾಯಕನಾಗುವ ಆಸಕ್ತಿ ಇರಲಿಲ್ಲ ಎಂದು ವರದಿಯಾಗಿದೆ.

ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕನಾಗಲು ಎಂದಿಗೂ ಆಸಕ್ತಿ ಹೊಂದಿರಲಿಲ್ಲ ಎಂದು ಪಿಟಿಐ ವರದಿ ಮಾಡಿದೆ. ವಾಸ್ತವವಾಗಿ ರೋಹಿತ್ ಶರ್ಮಾಗೆ ತನ್ನ ದೇಹ ಟೆಸ್ಟ್ ಕ್ರಿಕೆಟ್​ಗೆ ಹೊಂದಿಕೊಳ್ಳುತ್ತದೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಗ್ಯಾರಂಟಿ ಇರಲಿಲ್ಲ. ಹೀಗಾಗಿ ರೋಹಿತ್ ಶರ್ಮಾ ತಮ್ಮ ಫಿಟ್‌ನೆಸ್‌ನಿಂದಾಗಿ ಟೆಸ್ಟ್ ನಾಯಕತ್ವವನ್ನು ಬಯಸಿರಲಿಲ್ಲ. ಆದರೆ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದ ಬಳಿಕ ಬೇರೆ ದಾರಿಯಿಲ್ಲದೆ ರೋಹಿತ್ ಟೆಸ್ಟ್ ನಾಯಕತ್ವವನ್ನು ಒಪ್ಪಿಕೊಂಡಿದ್ದರು ಎಂದು ವರದಿ ಹೇಳಿದೆ.

ರೋಹಿತ್ ಮನವೊಲಿಸಿದ ಸೌರವ್ ಗಂಗೂಲಿ

ಪಿಟಿಐ ವರದಿ ಪ್ರಕಾರ, ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ರೋಹಿತ್ ಶರ್ಮಾ ಅವರನ್ನು ಟೆಸ್ಟ್ ನಾಯಕರಾಗುವಂತೆ ಮನವೊಲಿಸಿದರು ಎಂದು ಹೇಳಿದೆ. ಸೌರವ್ ಗಂಗೂಲಿ ಆ ಸಮಯದಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದರು ಮತ್ತು ಜಯ್ ಶಾ ಇಂದಿನಂತೆ ಕಾರ್ಯದರ್ಶಿ ಹುದ್ದೆಯಲ್ಲಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕೆಎಲ್ ರಾಹುಲ್ ನಾಯಕನಾಗಿ ಪ್ರಭಾವ ಬೀರಲು ಸಾಧ್ಯವಾಗದ ಕಾರಣ ರೋಹಿತ್ ಶರ್ಮಾ ನಾಯಕನಾಗಲು ಮನವೊಲಿಸಬೇಕಾಯಿತು.

ಬಿಸಿಸಿಐಗೆ ತಿರುಗೇಟು ನೀಡಿದ ವಿರಾಟ್ ಕೊಹ್ಲಿ

ಇತ್ತೀಚೆಗೆ ಸೌರವ್ ಗಂಗೂಲಿ ಕೂಡ ವಿರಾಟ್ ನಾಯಕತ್ವದ ಬಗ್ಗೆ ಮಾತನಾಡಿದ್ದು, ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವುದು ಸ್ವತಃ ಬಿಸಿಸಿಐಗೆ ಇಷ್ಟವಿರಲಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ವಿರಾಟ್ ನಿರ್ಧಾರ ಬಿಸಿಸಿಐಗೆ ಅಚ್ಚರಿ ಮೂಡಿಸಿತ್ತು. ಇದಾದ ನಂತರ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಟೆಸ್ಟ್ ನಾಯಕನಾಗಿ ನೇಮಿಸಿತು.

ರೋಹಿತ್​ಗೆ ಎಷ್ಟು ದಿನ ಟೆಸ್ಟ್ ನಾಯಕತ್ವ

ವರದಿಗಳ ಪ್ರಕಾರ, ಸದ್ಯಕ್ಕೆ ರೋಹಿತ್ ಶರ್ಮಾ ಭಾರತದ ಟೆಸ್ಟ್ ನಾಯಕರಾಗಿ ಮುಂದುವರೆಯಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ತಂಡದ ನಾಯಕತ್ವ ರೋಹಿತ್ ಕೈಯಲ್ಲಿಯೇ ಇರಲಿದೆ. ಆದರೆ, ಆ ಸರಣಿಯ ನಂತರ ಟೆಸ್ಟ್ ನಾಯಕತ್ವದಲ್ಲಿ ಬದಲಾವಣೆ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *