Manipur Violence: ಮಣಿಪುರ ಪರಿಸ್ಥಿತಿ ಕುರಿತು ಸರ್ವಪಕ್ಷ ಸಭೆ ನಡೆಸಿದ ಅಮಿತ್‌ ಶಾ: ಶಾಂತಿ ಸ್ಥಾಪನೆಗೆ ಅಗತ್ಯ ಕ್ರಮದ ಭರವಸೆ

Manipur Violence: ಮಣಿಪುರ ಪರಿಸ್ಥಿತಿ ಕುರಿತು ಸರ್ವಪಕ್ಷ ಸಭೆ ನಡೆಸಿದ ಅಮಿತ್‌ ಶಾ: ಶಾಂತಿ ಸ್ಥಾಪನೆಗೆ ಅಗತ್ಯ ಕ್ರಮದ ಭರವಸೆ

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕುರಿತಂತೆ ಇಂದು ಸಂಸತ್ ಭವನದಲ್ಲಿ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಜರುಗಿತು.

ನವದೆಹಲಿ: ಮಣಿಪುರ ಪರಿಸ್ಥಿತಿ ಕುರಿತು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಸಂಸತ್ ಭವನದಲ್ಲಿ ಸರ್ವಪಕ್ಷ ಸಭೆ ನಡೆಯಿತು.

ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಶಾಂತಿ ಮತ್ತು ಸಹಜ ಸ್ಥಿತಿಗೆ ಮರಳಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಅಮಿತ್​ ಶಾ ವಿಪಕ್ಷ ನಾಯಕರಿಗೆ ಭರವಸೆ ನೀಡಿದ್ದಾರೆ ಎಂದು ಡಿಎಂಕೆ ಸಂಸದ ತಿರುಚಿ ಶಿವ ತಿಳಿಸಿದ್ದಾರೆ.

ಕಳೆದ 50 ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಆದ್ದರಿಂದ ಇಂದು ಗೃಹ ಸಚಿವರು ಸರ್ವಪಕ್ಷ ಸಭೆಯನ್ನು ಕರೆದಿದ್ದರು. ಈ ಮಹತ್ವದ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಪ್ರಮುಖವಾಗಿ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ (ಕಾಂಗ್ರೆಸ್), ಡೆರೆಕ್ ಒಬ್ರಿಯಾನ್ (ತೃಣಮೂಲ ಕಾಂಗ್ರೆಸ್), ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಿಂಗ್ (ಎನ್‌ಪಿಪಿ), ಎಂ ತಂಬಿ ದುರೈ (ಎಐಎಡಿಎಂಕೆ), ತಿರುಚಿ ಶಿವ (ಡಿಎಂಕೆ), ಪಿನಾಕಿ ಮಿಶ್ರಾ (ಬಿಜೆಡಿ), ಸಂಜಯ್ ಸಿಂಗ್ (ಆಮ್ ಆದ್ಮಿ ಪಕ್ಷ), ಮನೋಜ್ ಝಾ (ಆರ್‌ಜೆಡಿ) ಮತ್ತು ಪ್ರಿಯಾಂಕಾ ಚತುರ್ವೇದಿ (ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ನಿತ್ಯಾನಂದ ರೈ ಮತ್ತು ಅಜಯ್ ಕುಮಾರ್ ಮಿಶ್ರಾ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ಗುಪ್ತಚರ ಬ್ಯೂರೋದ ನಿರ್ದೇಶಕ ತಪನ್ ದೇಕಾ ಪಾಲ್ಗೊಂಡಿದ್ದರು.

ಈ ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಎಂಕೆ ಸಂಸದ ತಿರುಚಿ ಶಿವ, ಕಳೆದ 50 ದಿನಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ನಾವು ಕಳವಳ ವ್ಯಕ್ತಪಡಿಸಿದ್ದೇವೆ. ಹಿಂಸಾಚಾರ ಪೀಡಿತ ಈಶಾನ್ಯ ರಾಜ್ಯಕ್ಕೆ ಹೆಚ್ಚಿನ ಪಡೆಗಳನ್ನು ನಿಯೋಜಿಸಲು ಮತ್ತು ಮಣಿಪುರಕ್ಕೆ ಸರ್ವಪಕ್ಷ ನಿಯೋಗಕ್ಕೆ ಭೇಟಿಗೆ ಅವಕಾಶ ನೀಡಲು ಪ್ರತಿಪಕ್ಷದ ನಾಯಕರು ಒಮ್ಮತದಿಂದ ಅಮಿತ್​ ಶಾ ಅವರನ್ನು ಒತ್ತಾಯಿಸಿದರು ಎಂದು ಹೇಳಿದರು.

ನಮ್ಮೆಲ್ಲರ ಮಾತನ್ನು ಆಲಿಸಿದ ಗೃಹ ಸಚಿವರು, ನಾವು ಶಾಂತಿಯನ್ನು ಪುನಃಸ್ಥಾಪಿಸುತ್ತೇನೆ. ನನ್ನನ್ನು ನಂಬಿ ಎಂದು ಭರವಸೆ ನೀಡಿದರು. ನಾವು ಸರ್ವಪಕ್ಷಗಳ ನಿಯೋಗವನ್ನು ಮಣಿಪುರಕ್ಕೆ ಕಳುಹಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ಡಿಎಂಕೆ ಸಂಸದ ಮಾಹಿತಿ ನೀಡಿದರು. ಅಲ್ಲದೇ, ಮಣಿಪುರದ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸದ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರತಿಪಕ್ಷಗಳ ನಾಯಕರು ಪ್ರಶ್ನಿಸಿದ್ದಾರೆ. ಮ್ಯಾನ್ಮಾರ್‌ನೊಂದಿಗೆ ಸುದೀರ್ಘ ಗಡಿಯನ್ನು ಹಂಚಿಕೊಳ್ಳುವ ಗಡಿನಾಡಿನ ರಾಜ್ಯದಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಲು ಶಾ ಅವರಿಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ಮಣಿಪುರ ಹಿಂಸಾಚಾರವನ್ನು ನಿಯಂತ್ರಿಸಲು ರಾಜ್ಯದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಯನ್ನು ಈಗಾಗಲೇ ನಿಯೋಜಿಸಲಾಗಿದೆ ಎಂದು ಕೇಂದ್ರ ಹೇಳಿಕೊಂಡಿದೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತದ ವೈಫಲ್ಯ ಕಾರಣ ಎಂದು ಡಿಎಂಕೆ ನಾಯಕ ತಿರುಚಿ ಶಿವ ಟೀಕಿಸಿದರು.

ಇದುವರೆಗೆ 120 ಜನರ ಸಾವು: ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಮೈತಿಯಿ ಸಮುದಾಯದ ಬೇಡಿಕೆ ಇರಿಸಿದೆ. ವಿರೋಧಿಸಿ ಮೇ 3ರಂದು ಬುಡಕಟ್ಟಿನ ಕುಕಿ ಸಮುದಾಯ ಪ್ರತಿಭಟನೆ ನಡೆಸಿತ್ತು. ಇದರ ನಂತರ ಹಿಂಸಾತ್ಮಕ ಘರ್ಷಣೆಗಳು ನಡೆದು ಇದುವರೆಗೆ 120ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಂದಾಜು 3,000 ಜನರು ಗಾಯಗೊಂಡಿದ್ದಾರೆ. ಸಾವಿರಾರು ಜನರು ಹಿಂಸಾಚಾರ ಪೀಡಿತ ಸ್ಥಳಗಳಿಂದ ಬೇರೆಡೆ ತೆರಳಿ ಆಶ್ರಯ ಪಡೆದಿದ್ದಾರೆ. ಈ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರವು 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

Leave a Reply

Your email address will not be published. Required fields are marked *