RBI’s New Payment System: ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಇಂಥ ಆಪತ್ಪಾಲದ ಸಂಭಾವ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ರೀತಿಯ ಪೇಮೆಂಟ್ ವ್ಯವಸ್ಥೆ ರೂಪಿಸುತ್ತಿದೆ. ಇದು ಇನ್ನೂ ತಾತ್ವಿಕ ಹಂತದಲ್ಲಿದ್ದು, ಈಗಿರುವ ಯುಪಿಐ, ಆರ್​ಟಿಜಿಎಸ್, ಎನ್​ಇಎಫ್​ಟಿ ಇತ್ಯಾದಿ ಪೇಮೆಂಟ್ ವ್ಯವಸ್ಥೆಗಿಂತ ತೀರಾ ಭಿನ್ನವಾಗಿರಲಿದೆ ಎಂಬ ಮಾಹಿತಿ ಗೊತ್ತಾಗಿದೆ.

ನವದೆಹಲಿ: ನಮ್ಮಲ್ಲೀಗ ನೀರು, ವಿದ್ಯುತ್, ಇಂಟರ್ನೆಟ್ ಸಂಪರ್ಕ ವ್ಯಾಪಕವಾಗಿದೆ. ಎಲ್ಲರಿಗೂ ಸುಲಭವಾಗಿ ಈ ಸೌಲಭ್ಯಗಳು ಸಿಗುತ್ತಿವೆ. ಆದರೆ, ಭೀಕರ ನೈಸರ್ಗಿಕ ಅವಘಡ  (Natural Disaster), ಯುದ್ಧ ಇತ್ಯಾದಿ ಸಂಭವಿಸಿದಾಗ ಇವು ತಾತ್ಕಾಲಿಕವಾಗಿಯಾದರೂ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ. ಇಂತ ಸಂದರ್ಭದಲ್ಲಿ ನಾವು ಪರ್ಯಾಯ ವ್ಯವಸ್ಥೆ ಅಥವಾ ಪೂರ್ಣ ಸಿದ್ಧತೆ ಮಾಡಿಕೊಂಡಿರುವುದು ಉತ್ತಮ ಎಂದು ಯಾರಿಗಾದರೂ ಅನಿಸಬಹುದು. ಅಂಥದ್ದೇ ತುರ್ತು ಸಂದರ್ಭವು ಹಣಕಾಸು ವ್ಯವಸ್ಥೆಗೆ ಎರಗಿ ಬಂದರೆ, ಹಣಕಾಸು ಹರಿವು, ವಹಿವಾಟು ನಿಂತುಹೋಗುವಂಥ ಪರಿಸ್ಥಿತಿ ಬಂದರೆ ಹೇಗಿದ್ದೀತು? ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಇಂಥ ಆಪತ್ಪಾಲದ ಸಂಭಾವ್ಯತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ರೀತಿಯ ಪೇಮೆಂಟ್ ವ್ಯವಸ್ಥೆ ರೂಪಿಸುತ್ತಿದೆ.

ಇದು ಇನ್ನೂ ತಾತ್ವಿಕ ಹಂತದಲ್ಲಿದ್ದು, ಈಗಿರುವ ಯುಪಿಐ, ಆರ್​ಟಿಜಿಎಸ್, ಎನ್​ಇಎಫ್​ಟಿ ಇತ್ಯಾದಿ ಪೇಮೆಂಟ್ ವ್ಯವಸ್ಥೆಗಿಂತ ತೀರಾ ಭಿನ್ನವಾಗಿರಲಿದೆ ಎಂಬ ಮಾಹಿತಿ ಗೊತ್ತಾಗಿದೆ. ಇದಕ್ಕೆ ಬೇಕಾಗುವ ಹಾರ್ಡ್​ವೇರ್ ಮತ್ತು ಸಾಫ್ಟ್​ವೇರ್ ಎರಡೂ ತೀರಾ ಕಡಿಮೆ. ಅಗತ್ಯ ಇದ್ದಾಗ ಮಾತ್ರ ಇದನ್ನು ಆನ್ ಮಾಡಿಕೊಳ್ಳಬಹುದು. ಇಂಥದ್ದೊಂದು ಪೇಮೆಂಟ್ ವ್ಯವಸ್ಥೆ ಇನ್ನೂ ಸಿದ್ಧವಾಗಿಲ್ಲ. ಯಾವಾಗ ಇದು ರೆಡಿ ಆಗಬಹುದು ಎಂಬುದನ್ನು ಆರ್​ಬಿಐ ತಿಳಿಸಿಲ್ಲ.

ಆರ್​ಬಿಐನ ವಾರ್ಷಿಕ ವರದಿಯಲ್ಲಿ ಈ ಪೇಮೆಂಟ್ ಸಿಸ್ಟಂ ಅನ್ನು ಲೈಟ್ ವೈಟ್ ಅಂಡ್ ಪೋರ್ಟಬಲ್ ಪೇಮೆಂಟ್ ಸಿಸ್ಟಂ (LPSS- Light Weight and Portable Payment System) ಎಂದು ಹೆಸರಿಸಿದೆ. ಈ ವ್ಯವಸ್ಥೆಯು ಸಂಪೂರ್ಣ ಸ್ವಾಯತ್ತವಾಗಿದ್ದು (Autonomous), ಕಡಿಮೆ ಜನರಿಂದಲೇ ಇದನ್ನು ನಿರ್ವಹಿಸಬಹುದು. ಯುಪಿಐ, ಆರ್​ಟಿಜಿಎಸ್, ಎನ್​ಇಎಫ್​ಟಿಯಂತಹ ಪೇಮೆಂಟ್ ಸಿಸ್ಟಂಗಳು ದೊಡ್ಡ ಸಂಖ್ಯೆಯ ವಹಿವಾಟುಗಳ ನಿರ್ವಹಣೆಗೆಂದು ರೂಪಿಸಲಾಗಿದ್ದು, ಬಹಳ ಸಂಕೀರ್ಣವಾದ ಜಾಲದ ಮೇಲೆ ಅವಲಂಬಿತವಾಗಿವೆ. ನೈಸರ್ಗಿಕ ಅವಘಡದ ಸಂದರ್ಭದಲ್ಲಿ ಈ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ಹೋಗಬಹುದು. ಅದ್ದರಿಂದ ಸಂಕೀರ್ಣ ತಂತ್ರಜ್ಞಾನ ಇಲ್ಲದ, ಮತ್ತು ಬಂಕರ್ ರೀತಿಯಲ್ಲಿ ಉಪಯೋಗವಾಗುವಂತಹ ಪೇಮೆಂಟ್ ಸಿಸ್ಟಂ ಅನ್ನು ರೂಪಿಸುವುದು ಆರ್​ಬಿಐನ ಉದ್ದೇಶ.

ಬಲ್ಕ್ ಪೇಮೆಂಟ್​ಗಳು, ಇಂಟರ್​ಬ್ಯಾಂಕ್ ಪೇಮೆಂಟ್​ಗಳು ಆರ್ಥಿಕತೆಯ ಹಣಕಾಸು ಹರಿವಿಗೆ ಮುಖ್ಯ. ಆರ್​ಬಿಐನ ಉದ್ದೇಶಿತ ಪೇಮೆಂಟ್ ವ್ಯವಸ್ಥೆ ಈ ನಿಟ್ಟಿನಲ್ಲಿ ಕಾರ್ಯವಹಿಸುತ್ತದೆ.

Leave a Reply

Your email address will not be published. Required fields are marked *