200 ಯೂನಿಟ್ ಒಳಗೆ ಬಳಸಿದ್ರೆ ಉಚಿತ ವಿದ್ಯುತ್ ನೀಡಬೇಕು. ಆದರೆ, ಇದೀಗ ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದರ ಅರ್ಥ ಉಚಿತವಾಗಿ 200 ಯೂನಿಟ್ ವಿದ್ಯುತ್ ಕೊಡ್ತಿಲ್ಲ. ಕಾಂಗ್ರೆಸ್ ಸರ್ಕಾರದ ನಿಜಬಣ್ಣ ಈಗ ಬಯಲಾಗಿದೆ. ಇದು ಕಾಂಗ್ರೆಸ್ನ ಹಿಡನ್ ಅಜೆಂಡಾ ಎಂದು ಬೊಮ್ಮಾಯಿ ಟೀಕಿಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಪೂರ್ವದಲ್ಲಿ ಹೇಳಿರುವ ಮಾತುಗಳಿಗೂ ಚುನಾವಣೆ ಬಳಿಕ ಹೇಳಿದ ಮಾತಿಗೂ ವ್ಯತ್ಯಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು. ಗ್ಯಾರಂಟಿ ಯೋಜನೆಗಳ ಜಾರಿ ಘೋಷಣೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಮನೆಗೆ ಉಚಿತ 200 ಯೂನಿಟ್ ವಿದ್ಯುತ್ ಎಂದು ಹೇಳಿದ್ದರು. 200 ಯೂನಿಟ್ ಒಳಗೆ ಬಳಸಿದ್ರೆ ಉಚಿತ ವಿದ್ಯುತ್ ನೀಡಬೇಕು. ಆದರೆ, ಇದೀಗ ಸರಾಸರಿ ಆಧಾರದಲ್ಲಿ ಉಚಿತ ವಿದ್ಯುತ್ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅದರ ಅರ್ಥ ಉಚಿತವಾಗಿ 200 ಯೂನಿಟ್ ವಿದ್ಯುತ್ ಕೊಡ್ತಿಲ್ಲ. ಕಾಂಗ್ರೆಸ್ ಸರ್ಕಾರದ ನಿಜಬಣ್ಣ ಈಗ ಬಯಲಾಗಿದೆ. ಇದು ಕಾಂಗ್ರೆಸ್ನ ಹಿಡನ್ ಅಜೆಂಡಾ ಎಂದು ಟೀಕಿಸಿದರು.
ಗ್ಯಾರಂಟಿಯಲ್ಲಿ ಮೋಸ ಮಾಡ್ತಿದ್ದಾರೆ ಎಂಬುದನ್ನು ಮೊದಲೇ ಹೇಳಿದ್ದೆ. ಕೇಂದ್ರ ಸರ್ಕಾರ ಉಚಿತವಾಗಿ ತಲಾ 5 ಕೆಜಿ ಅಕ್ಕಿ ಕೊಡುತ್ತಿದೆ. ಕಾಂಗ್ರೆಸ್ ಸರ್ಕಾರ ಉಳಿದ 5 ಕೆಜಿ ಅಕ್ಕಿಯನ್ನು ಮಾತ್ರ ಕೊಡುತ್ತಿದೆ. 10 ಕೆಜಿಯಲ್ಲಿ ರಾಗಿ, ಜೋಳ ಸೇರಿದೆಯಾ, ಹೆಚ್ಚುವರಿ ಕೊಡ್ತಿದ್ದಾರಾ? ಅನ್ನಭಾಗ್ಯ ಯೋಜನೆ ಬಗ್ಗೆಯೂ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿಲ್ಲ. 10 ಕೆಜಿಯಲ್ಲಿ ಅಕ್ಕಿ ಜತೆ ರಾಗಿ, ಜೋಳ ಇದೆಯೋ ಇಲ್ಲವೋ ಸ್ಪಷ್ಟವಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಗೃಹಲಕ್ಷ್ಮೀ ಯೋಜನೆಯಲ್ಲೂ ಭಾರಿ ಮೋಸ ಮಾಡುತ್ತಿದ್ದಾರೆ. ಆನ್ಲೈನ್ ಅರ್ಜಿಯಲ್ಲಿ ಅರ್ಧ ಫಲಾನುಭವಿಗಳನ್ನು ತೆಗೆಯುತ್ತಾರೆ. ಈ ಯೋಜನೆಯನ್ನು ಬಹಳ ಸರಳವಾಗಿ ಜಾರಿ ಮಾಡಬಹುದಿತ್ತು. ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾಹಿತಿ ಪಡೆದು ಹಣ ನೀಡಬಹುದಿತ್ತು. ಆಗಸ್ಟ್ನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಹಾಕುತ್ತೇವೆ ಅಂತಿದ್ದಾರೆ. ಜೂನ್, ಜುಲೈ ತಿಂಗಳ ಹಣ ಸೇರಿಸಿಕೊಡುವ ಬಗ್ಗೆ ಮಾಹಿತಿಯಿಲ್ಲ. ಒಂದುವೇಳೆ ಕೊಡದಿದ್ರೆ ಜೂನ್, ಜುಲೈ ತಿಂಗಳ ಹಣ ಏನಾಯ್ತು? ಮುಂದೆ ಇನ್ನೇನು ಷರತ್ತು ಹಾಕುತ್ತಾರೋ ನೋಡೋಣ ಎಂದು ಬೊಮ್ಮಾಯಿ ಹೇಳಿದರು.
ರಾಜ್ಯದೊಳಗೆ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣ ಎಂದಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಲ್ಲೂ ಗೊಂದಲವಿದೆ. ಉಚಿತ ಪ್ರಯಾಣ ಬಗ್ಗೆ ಅಧಿಕೃತ ಆದೇಶ ಬಂದಾಗ ಗೊತ್ತಾಗುತ್ತದೆ ಎಂದು ಅವರು ಹೇಳಿದರು.
ಪದವಿ ಆದ ತಕ್ಷಣ ಬಹಳಷ್ಟು ಮಂದಿ ಉನ್ನತ ವ್ಯಾಸಂಗ ಮಾಡುತ್ತಾರೆ. 3 ವರ್ಷದಿಂದ ನಿರುದ್ಯೋಗದಿಂದ ಇರುವವರಿಗೆ ಹಣ ನೀಡಬೇಕು ಎಂದು ಅವರು ಆಗ್ರಹಿಸಿದರು.
‘ಯೋಜನೆಗಳ ಖರ್ಚು ವೆಚ್ಚದ ಮಾಹಿತಿ ಇಲ್ಲ’
5 ಗ್ಯಾರಂಟಿ ಯೋಜನೆಗಳ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ. ಹಿಂದಿನ ಯೋಜನೆಗಳನ್ನು ನಿಲ್ಲಿಸ್ತಾರಾ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಜಲಜೀವನ್ ಮಿಷನ್ ಯೋಜನೆಗೆ ನಾವು ಹಣ ಒದಗಿಸಿದ್ದೆವು. ರಾಜ್ಯದ ಜನರ ತೆರಿಗೆ ಹಣ ಅಭಿವೃದ್ಧಿ ಯೋಜನೆಗಳಿಗೆ ಖರ್ಚಾಗಲಿ. ಆದಾಯ ಸೃಷ್ಟಿಸದಿದ್ದರೆ ರಾಜ್ಯಕ್ಕೆ ಆರ್ಥಿಕ ಹಿನ್ನಡೆ ಆಗುತ್ತದೆ. ಸರ್ಕಾರ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಬೇಕು ಎಂದು ಬೊಮ್ಮಾಯಿ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರ್ಥಿಕವಾಗಿ ಗೊತ್ತಿದೆ. ಆದ್ರೆ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.