RBI Annual Report Shows Counterfeit Currency: 2,000 ರೂ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿರುವ ಪ್ರಮಾಣ ಶೇ. 28ರಷ್ಟು ಕಡಿಮೆ ಆಗಿದೆ. 500 ರೂ ಮುಖಬೆಲೆ ನಕಲಿ ನೋಟುಗಳ ಸಂಖ್ಯೆ 91,110 ಆದರೆ, 2,000 ರೂ ಮುಖಬೆಲೆಯ ನಕಲಿ ನೋಟುಗಳು 9,806 ಇವೆ.

ನವದೆಹಲಿ: ಭಾರತದಲ್ಲಿ 500 ರೂ ಮುಖಬೆಲೆಯ ನಕಲಿ ನೋಟುಗಳು (Fake Notes) ಪತ್ತೆಯಾಗುವುದು ಹೆಚ್ಚುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಹೆಚ್ಚೂಕಡಿಮೆ ಒಂದು ಲಕ್ಷ ಸಮೀಪದಷ್ಟು 500 ರೂ ನಕಲಿ ನೋಟುಗಳು ಪತ್ತೆಯಾಗಿವೆ. 2021-22ಕ್ಕೆ ಹೋಲಿಸಿದರೆ 2022-23ರ ಹಣಕಾಸು ವರ್ಷದಲ್ಲಿ 500 ರೂ ಮುಖಬೆಲೆಯ ನಕಲಿ ನೋಟುಗಳು ಶೇ. 14.6ರಷ್ಟು ಹೆಚ್ಚು ಪತ್ತೆಯಾಗಿವೆ. ಹೆಚ್ಚು ನಕಲಿ ನೋಟುಗಳಿರಬಹುದು ಎಂದು ಭಾವಿಸಲಾಗಿರುವ 2,000 ರೂ ಮುಖಬೆಲೆಯ ನೋಟುಗಳಲ್ಲಿ ನಕಲಿ ನೋಟುಗಳು ಪತ್ತೆಯಾಗಿರುವ ಪ್ರಮಾಣ ಶೇ. 28ರಷ್ಟು ಕಡಿಮೆ ಆಗಿದೆ. 500 ರೂ ಮುಖಬೆಲೆ ನಕಲಿ ನೋಟುಗಳ ಸಂಖ್ಯೆ 91,110 ಆದರೆ, 2,000 ರೂ ಮುಖಬೆಲೆಯ ನಕಲಿ ನೋಟುಗಳು 9,806 ಇವೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ವಾರ್ಷಿಕ ವರದಿಯಲ್ಲಿ ಕಂಡು ಬಂದ ಅಂಶ.

ಈ ವರದಿ ಪ್ರಕಾರ 2021-22ರಲ್ಲಿ ಒಟ್ಟು 2,30,971 ನಕಲಿ ನೋಟುಗಳು ಪತ್ತೆಯಾಗಿದ್ದವು. ಈ ಸಂಖ್ಯೆ 2022-23ರಲ್ಲಿ ಇಳಿಮುಖವಾಗಿದೆ. ಈ ಹಣಕಾಸು ವರ್ಷದಲ್ಲಿ ಪತ್ತೆಯಾದ ನಕಲಿ ನೋಟುಗಳ ಸಂಖ್ಯೆ 2,25,769 ಇದೆ. ನಕಲಿ ನೋಟುಗಳು ಪತ್ತೆಯಾಗುವುದು ಹೆಚ್ಚಾಗಿರುವುದು 500 ರೂ ಮತ್ತು 20 ರೂ ಮುಖಬೆಲೆಯ ನೋಟುಗಳು ಮಾತ್ರವೇ. 2000 ರೂ, 10 ರೂ ಮತ್ತು 100 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕಡಿಮೆ ಆಗಿದೆ.

ಈ ನಕಲಿ ನೋಟುಗಳು ಪತ್ತೆಯಾಗಿರುವುದು ಎಲ್ಲಿ?

ನಕಲಿ ನೋಟುಗಳ ಹರಿವನ್ನು ಬ್ಯಾಂಕ್ ಹಂತದಲ್ಲಿ ತಡೆಯಲಾಗುತ್ತದೆ. ಬ್ಯಾಂಕಿಗೆ ಬರುವ ಪ್ರತಿಯೊಂದು ನೋಟನ್ನೂ ನಕಲಿ ನೋಟಿಗೆ ಪರಿಶೀಲಿಸಲಾಗುತ್ತದೆ. ಅಷ್ಟಾಗಿಯೂ ಬಹಳಷ್ಟು ನಕಲಿ ನೋಟುಗಳು ಬ್ಯಾಂಕ್ ಗಮನದಿಂದ ತಪ್ಪಿಸಿಕೊಂಡು ಆರ್​ಬಿಐನಲ್ಲಿ ಪತ್ತೆಯಾಗಿವೆ. 2022-23ರಲ್ಲಿ ಪತ್ತೆಯಾದ ನಕಲಿ ನೋಟುಗಳ ಪೈಕಿ ಶೆ. 4.6ರಷ್ಟು ನೋಟುಗಳು ಆರ್​ಬಿಐನಲ್ಲಿ ಪತ್ತೆಯಾಗಿವೆ. ಇನ್ನುಳಿದ ನಕಲಿ ನೋಟುಗಳನ್ನು ಬ್ಯಾಂಕ್​ಗಳಲ್ಲೇ ಕಂಡುಹಿಡಿಯಲಾಗಿದೆ.

2000 ರೂ, 500 ರೂ ನೋಟುಗಳೇ ಅತಿಹೆಚ್ಚು

ಭಾರತದಲ್ಲಿ ಸದ್ಯ ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ನೋಡುವುದಾದರೆ ಶೇ. 87.9ರಷ್ಟು ಮೊತ್ತವು 500 ರೂ ಮತ್ತು 2,000 ರೂ ಮುಖಬೆಲೆಯ ನೋಟುಗಳೇ ಇವೆ. ಇನ್ನು, ಒಟ್ಟಾರೆ ನೋಟುಗಳ ಸಂಖ್ಯೆಯಲ್ಲಿ ಶೇ. 37.9ರಷ್ಟು ನೋಟುಗಳು 500 ರೂನದ್ದಾಗಿದೆ. ಅದಾದ ಬಳಿಕ ಅತಿಹೆಚ್ಚು ನೋಟುಗಳಿರುವುದು 10 ರೂನದ್ದು.

Leave a Reply

Your email address will not be published. Required fields are marked *