Earthquake: ಉತ್ತರದಲ್ಲಿ ಮತ್ತೆ ಕಂಪಿಸಿದ ಭೂಮಿ.. ಬೆಚ್ಚಿಬಿದ್ದ ಅಸ್ಸೋಂ ಜನತೆ

Earthquake: ಉತ್ತರದಲ್ಲಿ ಮತ್ತೆ ಕಂಪಿಸಿದ ಭೂಮಿ.. ಬೆಚ್ಚಿಬಿದ್ದ ಅಸ್ಸೋಂ ಜನತೆ

Earthquake Jolts Assam: ಎಲ್ಲರೂ ತಮ್ಮ ಕಾರ್ಯಗಳಿಗೆ, ಆಫೀಸ್​ಗಳಿಗೆ, ಶಾಲೆಗೆ ತೆರಳುವ ಸಮಯದಲ್ಲಿ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿರುವ ಘಟನೆ ಅಸ್ಸೋಂನ ಗುವಾಹಟಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಕಂಡು ಬಂದಿದೆ.

ಗುವಾಹಟಿ, ಅಸ್ಸೋಂ: ನಗರದಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಭೂಮಿ ಕಂಪಿಸಿರುವುದರ ಬಗ್ಗೆ ವರದಿಯಾಗಿದೆ.

ಭೂಕಂಪನವು ರಿಕ್ಟರ್ ಮಾಪಕದಲ್ಲಿ 4.8 ರಷ್ಟು ದಾಖಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಗುವಾಹಟಿ ನಗರದ ಜನತೆಗೆ ಶುಕ್ರವಾರ ಬೆಳಗ್ಗೆ 10.16 ಗಂಟೆಗೆ ಸುಮಾರಿಗೆ ಭೂಕಂಪನದ ಅನುಭವವಾಗಿದೆ ಎಂದು ಮಾಹಿತಿ ನೀಡಿದೆ.

ಭೂಕಂಪದ ಕೇಂದ್ರ ಬಿಂದು ಬಾಂಗ್ಲಾದೇಶದ ಸಿಲ್ಹೆಟ್ ಪ್ರದೇಶದ 70 ಕಿಮೀ ಆಳದಲ್ಲಿ ಕಂಡು ಬಂದಿದೆ. 20 ಸೆಕೆಂಡುಗಳ ಕಾಲ ಭೂಮಿ ನಡುಗಿದ್ದು, ಕಂಪನವು ಮುಖ್ಯವಾಗಿ ಅಸ್ಸೋಂನ ಗುವಾಹಟಿ ಮತ್ತು ಈಶಾನ್ಯ ಪ್ರದೇಶದ ಇತರ ಭಾಗದ ಜನತೆಗೆ ಭೂಕಂಪನದ ಅನುಭವವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಕಳೆದ ವಾರ ಅಸ್ಸೋಂನಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರವು ತೇಜ್‌ಪುರದ ಪಶ್ಚಿಮಕ್ಕೆ 39 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಪತ್ತೆಯಾಗಿತ್ತು.

ವಾರದ ಹಿಂದೆ ಸಂಭವಿಸಿದ್ದ ಭೂಕಂಪ: ತೇಜ್‌ಪುರ ಜನತೆಗೆ ಭಾನುವಾರ ರಾತ್ರಿ 11.35ಕ್ಕೆ ಭೂಕಂಪದ ಅನುಭವವಾಗಿತ್ತು. ಭೂಕಂಪವು ರಿಕ್ಟರ್ ಮಾಪಕದಲ್ಲಿ 3.6 ರಷ್ಟು ದಾಖಲಾಗಿತ್ತು. ಸೋನಿತ್‌ಪುರ ಜಿಲ್ಲೆಯಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿತ್ತು ಎಂದು ಹವಾಮಾನ ಕಚೇರಿ ತಿಳಿಸಿತ್ತು.

ನಾಲ್ಕನೇ ಬಾರಿ ಕಂಪಿಸಿದ ಭೂಮಿ: ರಾಜ್ಯದಲ್ಲಿ ಶನಿವಾರ ರಾತ್ರಿಯಿಂದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ 20 ದಿನಗಳಲ್ಲಿ 4 ಬಾರಿ ಭೂಕಂಪನದ ಅನುಭವವಾಗಿದೆ. ಅಷ್ಟೇ ಅಲ್ಲ ಕೆಲ ದಿನಗಳ ಹಿಂದೆ ನೆರೆಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು.

ಮೇ 29 ರಂದು ಬೆಳಗ್ಗೆ ಸೋನಿತ್‌ಪುರ ಜಿಲ್ಲೆ ಸೇರಿದಂತೆ ಅಸ್ಸೋಂನ ಹಲವು ಜಿಲ್ಲೆಗಳಲ್ಲಿ ಭೂಕಂಪನ ಸಂಭವಿಸಿತ್ತು. ಭೂಕಂಪವು ರಿಕ್ಟರ್ ಮಾಪಕದಲ್ಲಿ 4.4 ರಷ್ಟಿತ್ತು ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಸೋನಿತ್‌ಪುರ ಜಿಲ್ಲೆಯಲ್ಲಿ ಬೆಳಗ್ಗೆ 8.03ಕ್ಕೆ ಭೂಕಂಪ ಸಂಭವಿಸಿದ್ದು, ಕೇವಲ 15 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.

ಏಪ್ರಿಲ್ 28, 2021 ರಂದು 6.8 ತೀವ್ರತೆಯ ಭೂಕಂಪವು ಸೋನಿತ್‌ಪುರವನ್ನು ಅಪ್ಪಳಿಸಿತ್ತು. ನಂತರ ಒಂದೇ ದಿನದಲ್ಲಿ ನಾಲ್ಕು ದೊಡ್ಡ ಭೂಕಂಪಗಳು ಮತ್ತು ಒಂದು ವಾರದವರೆಗೆ ಒಟ್ಟು 34 ಸಣ್ಣ ಭೂಕಂಪಗಳು ಸಂಭವಿಸಿದ್ದವು. ಈ ಬಗ್ಗೆ ಹವಾಮಾನ ಕಚೇರಿ ತಿಳಿಸಿತ್ತು. ಉತ್ತರ ಅಸ್ಸೋಂನಲ್ಲಿ ಭೂಕಂಪಗಳನ್ನು ತಡೆಗಟ್ಟಲು ಸರ್ಕಾರವು ಎಲ್ಲಾ ಜಿಲ್ಲೆಗಳಲ್ಲಿ ವಿಪತ್ತು ತಗ್ಗಿಸುವ ವಿಭಾಗಗಳನ್ನು ಬಲಪಡಿಸಿದೆ. ಈ ಇಲಾಖೆಯು ಸ್ಥಳೀಯ SDRF ಜೊತೆಗೆ ಕೇಂದ್ರ ಇಲಾಖೆ ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ಇಲಾಖೆಗೆ ಲಿಂಕ್ ಆಗಿದೆ.

ಮೂರು ದಿನಗಳ ಹಿಂದೆ ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ: ಮಂಗಳವಾರ, ಜೂನ್ 13 ರ ಮಧ್ಯಾಹ್ನ 1.30ರ ಸುಮಾರು ಜಮ್ಮು-ಕಾಶ್ಮೀರದಲ್ಲಿ ಭೂಕಂಪನ ಸಂಭವಿಸಿತ್ತು. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 5.4 ದಾಖಲಾಗಿತ್ತು. ಅಷ್ಟೇ ಅಲ್ಲ ಜಮ್ಮು-ಕಾಶ್ಮೀರ ಹೊರತು ಪಡಿಸಿ ಉತ್ತರ ಭಾರತದ ಕೆಲ ಭಾಗಗಳಲ್ಲಿಯೂ ಭೂಕಂಪನದ ಅನುಭವ ಆಗಿತ್ತು.

Leave a Reply

Your email address will not be published. Required fields are marked *