ಶಾಸಕಾಂಗ ಪಕ್ಷದ ನಾಯಕನ ನೇಮಕಕ್ಕೆ ಸಂಬಂಧಿಸಿದಂತೆ ಶಾಸಕರ ಅಭಿಪ್ರಾಯವನ್ನು ಅರುಣ್ ಸಿಂಗ್ ಸಂಗ್ರಹಿಸಿ ಕೇಂದ್ರ ನಾಯಕರಿಗೆ ಸಲ್ಲಿಸಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು: ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ (Karnataka Assembly Election Results 2023)  ಕಾರಣಗಳ ಕುರಿತು ಚರ್ಚಿಸಲು ಬಿಜೆಪಿ (BJP) ನಾಯಕರು ಗುರುವಾರ ಆತ್ಮಾವಲೋಕನ ನಡೆಸಿದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಶಾಸಕಾಂಗ ಪಕ್ಷದ ನಾಯಕನ ನೇಮಕದ ಕುರಿತು ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ, ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆಎಸ್ ಈಶ್ವರಪ್ಪ ಸೇರಿದಂತೆ ಹಲವು ಹಿರಿಯ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಬಿಜೆಪಿಯ ಉನ್ನತ ನಾಯಕರು ಮೊದಲು ಚುನಾಯಿತ ಶಾಸಕರೊಂದಿಗೆ ಸಭೆ ನಡೆಸಿ ನಂತರ ಪರಾಜಿತ ಅಭ್ಯರ್ಥಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಲೋಕಸಭೆಯ ಸಿದ್ಧತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂಬತ್ತು ವರ್ಷಗಳು ಕಳೆದಿವೆ ಮತ್ತು ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳ ಕುರಿತು ಹೆಚ್ಚು ಜನರಿಗೆ ಮಾಹಿತಿ ತಲುಪುವಂತೆ ಮಾಡುವ ಮಾರ್ಗಗಳ ಬಗ್ಗೆ ನಾವು ಚರ್ಚಿಸಿದ್ದೇವೆ. ನಾವು ಎಲ್ಲಿ ತಪ್ಪು ಮಾಡಿದೆವು ಮತ್ತು ಚುನಾವಣೆಯ ಸಮಯದಲ್ಲಿ ನಾವು ಏನು ಮಾಡಬಹುದಾಗಿತ್ತು ಎಂಬುದನ್ನು ನಾವು ಚರ್ಚಿಸಿದ್ದೇವೆ. ಪಕ್ಷದ ಬಲವರ್ಧನೆ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಡುವ ಕಾರ್ಯತಂತ್ರವನ್ನು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಬೊಮ್ಮಾಯಿ ಹೇಳಿದರು.

ಶಾಸಕಾಂಗ ಪಕ್ಷದ ನಾಯಕನ ನೇಮಕಕ್ಕೆ ಸಂಬಂಧಿಸಿದಂತೆ ಶಾಸಕರ ಅಭಿಪ್ರಾಯವನ್ನು ಅರುಣ್ ಸಿಂಗ್ ಸಂಗ್ರಹಿಸಿ ಕೇಂದ್ರ ನಾಯಕರಿಗೆ ಸಲ್ಲಿಸಲಿದ್ದಾರೆ ಎಂದು ಮಾಜಿ ಸಿಎಂ ತಿಳಿಸಿದರು.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತನಾಡಿ, ರಾಜ್ಯದ ಜನತೆ ಕಾಂಗ್ರೆಸ್ ‘ಗ್ಯಾರಂಟಿ’ಗಳನ್ನು ನಂಬಿ ಮತ ಹಾಕಿದ್ದಾರೆ. ನಾವು ನಮ್ಮ ಸೋಲಿಗೆ ಕಾರಣಗಳನ್ನು ಹುಡುಕಲು ಪ್ರಯತ್ನಿಸಿದ್ದೇವೆ. ಕೆಲವು ಸಂದರ್ಭಗಳಲ್ಲಿ ನಾವು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲಿಲ್ಲ. ಜನರು ಕಾಂಗ್ರೆಸ್ ಭರವಸೆಗಳನ್ನು ನಂಬಿ ಮತ ಹಾಕಿದರು ಆದರೆ ಈಗ ಕಾಂಗ್ರೆಸ್​ನವರು ಷರತ್ತುಗಳನ್ನು ವಿಧಿಸಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135, ಬಿಜೆಪಿ 66 ಮತ್ತು ಜೆಡಿಎಸ್ 19 ಸ್ಥಾನ ಪಡೆದಿದ್ದವು.

Leave a Reply

Your email address will not be published. Required fields are marked *