30ರ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಮೂತ್ರಪಿಂಡ ಕಸಿ: ಫೋರ್ಟಿಸ್‌ ಆಸ್ಪತ್ರೆ ವೈದ್ಯರಿಂದ ವಿಶ್ವದಲ್ಲೇ ಅಪರೂಪದ ಚಿಕಿತ್ಸೆ!

30ರ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಮೂತ್ರಪಿಂಡ ಕಸಿ: ಫೋರ್ಟಿಸ್‌ ಆಸ್ಪತ್ರೆ ವೈದ್ಯರಿಂದ ವಿಶ್ವದಲ್ಲೇ ಅಪರೂಪದ ಚಿಕಿತ್ಸೆ!

ನವೀನ ತಂತ್ರಜ್ಞಾನ ಮೂಲಕ ಸುಮಾರು ನಾಲ್ಕು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಡೆದಿದೆ.

ಬೆಂಗಳೂರು: ಕೇವಲ 13 ತಿಂಗಳ ಮಗುವಿನ ಎರಡೂ ಮೂತ್ರಪಿಂಡವನ್ನು 30 ವರ್ಷದ ವ್ಯಕ್ತಿಗೆ ಯಶಸ್ವಿಯಾಗಿ “ರೋಬೋಟಿಕ್‌ ಎನ್‌- ಬ್ಲಾಕ್‌” ವಿಧಾನದ ಮೂಲಕ ಕಸಿ ಮಾಡಲಾಗಿದ್ದು, ಈ ಪ್ರಕರಣ ವಿಶ್ವದಲ್ಲಿಯೇ ಅತೀ ಅಪರೂಪದ್ದಾಗಿದೆ.

ಫೋರ್ಟಿಸ್‌ ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಮತ್ತು ರೋಬೋಟಿಕ್ ಸರ್ಜರಿ ಹಿರಿಯ ನಿರ್ದೇಶಕ ಮೋಹನ್ ಕೇಶವಮೂರ್ತಿ, ಡಾ. ಶ್ರೀಹರ್ಷ ಹರಿನಾಥ ಅವರ ತಂಡವು ಅಪರೂಪದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಡಾ. ಕೇಶವಮೂರ್ತಿ, 30 ವರ್ಷದ ವ್ಯಕ್ತಿಯು ದೀರ್ಘಕಾಲದಿಂದ ಮೂತ್ರಪಿಂಡದ ವೈಫಲ್ಯಕ್ಕೆ ಒಳಗಾಗಿ ಹಿಮೋಡಯಾಲಿಸಿಸ್‌ ಮಾಡಿಕೊಳ್ಳುತ್ತಿದ್ದರು. ಇವರಿಗೆ ಕಿಡ್ನಿ ಕಸಿ ಮಾಡುವುದು ಅನಿವಾರ್ಯವಾಗಿತ್ತು. ಈ ಮಧ್ಯೆ 13 ತಿಂಗಳ ಮಗುವೊಂದು ಉಸಿರುಗಟ್ಟಿ ಸಾವನ್ನಪ್ಪಿದ್ದರಿಂದ ಅವರ ಪೋಷಕರ ಒಪ್ಪಿಗೆ ಮೇರೆಗೆ ಆ ಸಣ್ಣ ಮಗುವಿನ ಕಿಡ್ನಿಯನ್ನು ದಾನವಾಗಿ ಪಡೆಯಲಾಯಿತು. ಮಗು ಕೇವಲ 7.3 ಕೆಜಿ ಹೊಂದಿತ್ತು. 30 ವರ್ಷದ ಈ ವ್ಯಕ್ತಿಯೂ 50 ಕೆಜಿ ತೂಕವುಳ್ಳವರಾಗಿದ್ದರು. ಇವರಿಗೆ ಮಗುವಿನ ಕಿಡ್ನಿ ಕಸಿ ಮಾಡುವುದು ಸವಾಲಿನ ಕೆಲಸವಾಗಿತ್ತು. ಆದರೆ, ಸವಾಲಾಗಿ ಸ್ವೀಕರಿಸಿ ರೋಬೋಟಿಕ್ ಎನ್- ಬ್ಲಾಕ್ ಮೂಲಕ ಕಿಡ್ನಿಯನ್ನು ಕಸಿ ಮಾಡಲಾಯಿತು.

ರೋಬೋಟಿಕ್‌ ಎನ್‌- ಬ್ಲಾಕ್‌, ನವೀನ ತಂತ್ರವು ಕಸಿ ಮಾಡಿದ ಮೂತ್ರಪಿಂಡಗಳನ್ನು ಸ್ವೀಕರಿಸುವವರ ದೇಹದ ತೂಕಕ್ಕೆ ಅನುಗುಣವಾಗಿ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಶಸ್ತ್ರಚಿಕಿತ್ಸೆಯು ಸುಮಾರು ನಾಲ್ಕು ಗಂಟೆವರೆಗೆ ಸಾಗಿತು. ಸಂಕೀರ್ಣ ಶಸ್ತ್ರಚಿಕಿತ್ಸೆಯ ನಂತರ ರೋಗಿಯನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ, ಆರೈಕೆ ಮಾಡಲಾಯಿತು. 12 ದಿನಗಳ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು ಎಂದು ಮಾಹಿತಿ ನೀಡಿದರು.

ಫೋರ್ಟಿಸ್ ಆಸ್ಪತ್ರೆಯ ಬಿಸ್ನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ಮೂತ್ರಪಿಂಡ ಕಸಿಯಲ್ಲಿ ರೋಬೋಟಿಕ್‌ ಅಳವಡಿಕೆಯಿಂದ ಯಾವುದೇ ಕಷ್ಟಕರ ಶಸ್ತ್ರಚಿಕಿತ್ಸೆಯಾದರೂ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತಿದೆ. ಅದರಲ್ಲೂ ಸಣ್ಣ ಮಗುವಿನ ಕಿಡ್ನಿಯನ್ನು ದೊಡ್ಡವರಿಗೆ ಅಳವಡಿಸುವುದೊಂದು ಸವಾಲು. ವಿನೂತನ ಪ್ರಯತ್ನವನ್ನು ನಮ್ಮ ವೈದ್ಯರ ತಂಡ, ಇರುವ ನೂತನ ಟೆಕ್ನಾಲಜಿ ಬಳಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈ ಮೂಲಕ ಇದು ವಿಶ್ವದಲ್ಲಿಯೇ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದು ಹೇಳಿದರು.

ಕರುಳಿನ ಕ್ಯಾನ್ಸರ್​ಗೆ ಯಶಸ್ವಿ ಚಿಕಿತ್ಸೆ: ದೇಹದ ಬಲ ಭಾಗದಲ್ಲಿರಬೇಕಾದ ಯಕೃತ್​ ಎಡಬದಿಯಲ್ಲಿದ್ದರೂ, ಕರುಳಿನ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಯಶಸ್ವಿ ಚಿಕಿತ್ಸೆ ನಡೆಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಕ್ಯಾನ್ಸರ್​ಗೆ ಚಿಕಿತ್ಸೆಗೆಂದು ಮಹಿಳೆ ಆಸ್ಪತ್ರೆಗೆ ಬಂದಾಗ, ತಪಾಸಣೆ ಮಾಡಿದ ವೈದ್ಯರಿಗೆ ಒಂದು ಅಚ್ಚರಿ ಕಾದಿತ್ತು. ಅದೇನೆಂದರೆ, ಸಾಮಾನ್ಯವಾಗಿ ಮನುಷ್ಯರಿಗೆ ಯಕೃತ್​ ದೇಹದ ಬಲ ಭಾಗದಲಲ್ಲಿರುತ್ತದೆ. ಆದರೆ ಈ ಮಹಿಳೆಗೆ ಯಕೃತ್​ ದೇಹದ ಎಡಭಾಗದಲ್ಲಿತ್ತು. ಈ ಮಹಿಳೆಗೆ ಕರುಳಿನ ಕ್ಯಾನ್ಸರ್​ಗೆ ಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವಾಗಿದ್ದರೂ ಆ ಸವಾಲನ್ನು ಸ್ವೀಕರಿಸಿದ ನಿಲ್ ರತನ್ ಸಿರ್ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಕರುಣಿನ ಕ್ಯಾನ್ಸರ್​ಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು.

Leave a Reply

Your email address will not be published. Required fields are marked *