ಕನಕಪುರ: ಈ ಬಾರಿ ಶತಾಯಗತಾಯ ಮುಖ್ಯಮಂತ್ರಿ ಆಗಿಯೇ ತೀರಬೇಕು ಎಂದು ಹಠ ಹಿಡಿದಿದ್ದ ಕನಕಪುರದ ಬಂಡೆ, ಹೈಕಮಾಂಡ್ ಆದೇಶದಿಂದಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡರು. ಆದರೆ ಇಂದು ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಇಂದು ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದ್ದ ಮತದಾರರಿಗೆ ಧನ್ಯವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ “ನನ್ನನ್ನು ಮುಖ್ಯಮಂತ್ರಿಯನ್ನಾಗಿಸಬೇಕು ಎಂದು ಅತ್ಯಧಿಕ ಮತಗಳೊಂದಿಗೆ ಗೆಲ್ಲಿಸಿದ್ದೀರಿ. ಹೈಕಮಾಂಡ್ ಡಿಸಿಎಂ ಜವಾಬ್ದಾರಿ ನೀಡಿದೆ. ಆದರೆ ನಿರಾಶರಾಗುವುದು ಬೇಡ. ಮುಂದೆ ಒಳ್ಳೆಯ ದಿನಗಳು ಬರಲಿವೆ.

ನಾನು ಸಿದ್ದರಾಮಯ್ಯನವರು ನಾಡ ದೇವತೆ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಪ್ರಾರ್ಥನೆ ಮಾಡಿ ನಾವು ಕೊಟ್ಟಿರುವ ಮಾತು ಉಳಿಸಿಕೊಳ್ಳುವ ಹಾಗೂ ಗ್ಯಾರಂಟಿ ಯೋಜನೆ ಜಾರಿ ಮಾಡಲು ಸಾಮರ್ಥ್ಯ ಕೊಡುವಂತೆ ಕೇಳಿಕೊಂಡಿದ್ದೆವು” ಎಂದು ಹೇಳಿ ತಮ್ಮ ಸಿಎಂ ಆಗುವ ಆಸೆ ಇನ್ನೂ ಕಮರಿಲ್ಲ ಎನ್ನುವುದನ್ನು ಸೂಚಿಸಿದರು.

ಇದೇ ಸಂದರ್ಭದಲ್ಲಿ ಅವರು “ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರ ಮಾತು ಕೇಳಿ ಒಪ್ಪಿಕೊಂಡೆ. ನಿಮ್ಮ ನಿರೀಕ್ಷೆ ಹುಸಿಯಾಗುವುದಿಲ್ಲ” ಎನ್ನುವ ಮೂಲಕ ತಮ್ಮ ಮುಖ್ಯಮಂತ್ರಿ ಆಗುವ ನಿರ್ಧಾರ ಇನ್ನೂ ಕದಲಿಲ್ಲ ಎನ್ನುವುದನ್ನು ತೋರಿಸಿದ್ದಾರೆ. ನಂತರ ಅವರು “ನನ್ನನ್ನು ಮುಖ್ಯಮಂತ್ರಿ ಮಾಡಲು ನೀವು ಬಹಳ ಆಸೆಯಿಂದ ಕೆಲಸ ಮಾಡಿದ್ದಿರಿ. ನೀವು ಆತಂಕ, ನಿರಾಸೆಪಡುವ ಅಗತ್ಯವಿಲ್ಲ. ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ನಾವು ಶಾಂತಿಯಿಂದ, ಶ್ರದ್ಧೆಯಿಂದ ಕೆಲಸ ಮಾಡಬೇಕಿದೆ.

ಈಗ ನಾನು, ಸಿದ್ದರಾಮಯ್ಯ, ಸಚಿವ ಸಂಪುಟ ಸಚಿವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಿದೆ.

ದೇಶ ಹಾಗೂ ರಾಜ್ಯದ ಇತಿಹಾಸದಲ್ಲಿ ಒಂದೇ ದಿನ ಐದು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನ ನಿನ್ನೆ ಕೈಗೊಳ್ಳಲಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ನವರ ದುಃಖ, ದುಗುಡ ಹೆಚ್ಚಾಗಿದ್ದು, ರಾಜ್ಯದ ಜನ ನೋಡುತ್ತಿದ್ದಾರೆ. ನೀವೆಲ್ಲರೂ ನಿಮ್ಮ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ ಈ ಯೋಜನೆ ಲಾಭ ಸಿಗುವಂತೆ ಮಾಡಬೇಕು” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *