ಬುಧವಾರ ಇಂದು ಹತ್ತು ಕಡೆಯಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ದಾಳಿ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.
ಬೆಂಗಳೂರು: ಬುಧವಾರ ಇಂದು ಹತ್ತು ಕಡೆಯಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ದಾಳಿ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ಹಾವೇರಿಯಲ್ಲಿ ವಾಗೀಶ್ ಶೆಟ್ಟರ್ ಮನೆ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು 4.75 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. 500 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 18.30 ಲಕ್ಷ ನಗದು, 3 ಕಾರು, 2 ಟ್ರ್ಯಾಕ್ಟರ್, 2 ಬೈಕ್, ಹಣ ಎಣಿಕೆ ಮಾಡುವ ಮಶೀನ್ ಮತ್ತು 8 ಮನೆ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 16 ಸೈಟ್ಗಳು, 65 ಎಕರೆ ಭೂಮಿ ಹೊಂದಿರುವ ದಾಖಲೆ ಪತ್ರಗಳು ಸೇರಿದಂತೆ 10 ಇಂಚಿನ ಜಿಂಕೆ ಕೊಂಬು ಕೂಡ ಪತ್ತೆಯಾಗಿದೆ.
ಇಂಡಸ್ಟ್ರೀಸ್ ಆ್ಯಂಡ್ ಬಾಯ್ಲರ್ಸ್ ಇಲಾಖೆಯ ಉಪ ನಿರ್ದೇಶಕ ಟಿ.ವಿ.ನಾರಾಯಣಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಈ ವೇಳೆ 2,58,76,000 ಮೌಲ್ಯದ ಆಸ್ತಿ, 22.55 ಲಕ್ಷ ಮೌಲ್ಯದ 2 ಬೈಕ್, ಚಿನ್ನಾಭರಣ, ಬೆಳ್ಳಿ ವಸ್ತುಗಳು ಪತ್ತೆಯಾಗಿವೆ.
10 ಎಕರೆ ಕೃಷಿ ಭೂಮಿ, 3 ಮನೆಗಳು, ಗೃಹೋಪಯೋಗಿ ವಸ್ತು, 2 ಕೋಟಿ 36 ಲಕ್ಷದ 26 ಸಾವಿರ ಮೌಲ್ಯದ ಒಂದು ಸೈಟ್, ಬೆಂಗಳೂರಿನ ವಿಜಯನಗರ, ಕೆ.ಆರ್.ಪುರಂನಲ್ಲಿರುವ ಮನೆ, ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಕೃಷಿ ಜಮೀನು ಹೊಂದಿದ್ದಾರೆ.
25 ಲಕ್ಷ ಮೌಲ್ಯದ 3.5 ಕೆಜಿ ಚಿನ್ನ, 24 ಕೆಜಿ ಬೆಳ್ಳಿ ಪತ್ತೆ
ಶಿವಮೊಗ್ಗ ಜಿಲ್ಲೆಯ ಹಲವೆಡೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ ಮೌಲ್ಯದ ಚಿನ್ನಾಭರಣ, ಆಸ್ತಿ ಪತ್ರಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತುಂಗಾ ಮೇಲ್ದಂಡೆ ಇಇ ಪ್ರಶಾಂತ್ ಮನೆಯಲ್ಲಿ 25 ಲಕ್ಷ ಮೌಲ್ಯದ 3.5 ಕೆಜಿ ಚಿನ್ನ, 24 ಕೆಜಿ ಬೆಳ್ಳಿ, 50 ವಿದೇಶಿ ಮದ್ಯದ ಬಾಟಲ್, ಬೆಂಗಳೂರಿನಲ್ಲಿ ಎರಡು ಸೈಟು, 6 ಎಕರೆ ಕೃಷಿ ಜಮೀನಿಗೆ ಸಂಬಂಧಿಸಿದ ಆಸ್ತಿ ಪತ್ರಗಳು ಪತ್ತೆ ಹಚ್ಚಲಾಗಿದೆ. ಶಿಕಾರಿಪುರದ ಪಂಚಾಯತ್ ರಾಜ್ ಇಂಜಿನಿಯರ್ ಶಂಕರ್ ನಾಯ್ಕ್ ಮನೆಯಲ್ಲಿ 350 ಗ್ರಾಂ ಚಿನ್ನಾಭರಣ, 10 ಎಕರೆ ಕೃಷಿ ಜಮೀನಿನ ದಾಖಲೆ ಪತ್ರ ಪತ್ತೆಯಾಗಿವೆ.
ಬೆಂಗಳೂರಿನಲ್ಲಿ ಬೆಸ್ಕಾಂ ಮುಖ್ಯ ಇಂಜಿನಿಯರ್ ಆಗಿರುವ ಹೆಚ್.ಜೆ.ರಮೇಶ್ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ. ರಮೇಶ್ಗೆ ಸಂಬಂಧಿಸಿದ 4 ಕಡೆ ದಾಳಿ ನಡೆಸಿದ್ದ ಲೋಕಾಯುಕ್ತ, 1 ಕೋಟಿ 40 ಲಕ್ಷ ಮೌಲ್ಯದ 1 ದ್ವಿಚಕ್ರ ವಾಹನ, ಒಂದು ಕಾರು, ಗೃಹೋಪಯೋಗಿ ವಸ್ತುಗಳು, ವಿದೇಶಿ ಮದ್ಯದ ಬಾಟಲಿಗಳು ಪತ್ತೆ ಆಗಿವೆ.
ಏರೋಸ್ಪೇಸ್ ಪಾರ್ಕ್ ಇಂಡಸ್ಟ್ರಿಯಲ್ ಏರಿಯಾದಲ್ಲಿ 1 ಫ್ಲ್ಯಾಟ್, ಡಾಬಸ್ಪೇಟೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಭೂಮಿ, ಬಸವೇಶ್ವರನಗರದ BEML ಲೇಔಟ್ನಲ್ಲಿ ನಿರ್ಮಾಣ ಹಂತದ ಕಟ್ಟಡ ಸೇರಿದಂತೆ ಒಟ್ಟು 5 ಕೋಟಿ 60 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆ ಮಾಡಲಾಗಿದೆ.