ಉತ್ತಮ ಬಟ್ಟೆ ಮತ್ತು ಕೂಲಿಂಗ್ ಗ್ಲಾಸ್‌ ಧರಿಸಿದ ಕಾರಣಕ್ಕಾಗಿ ಸವರ್ಣೀಯ ಜಾತಿಯ ಗುಂಪೊಂದು ದಲಿತ ವ್ಯಕ್ತಿಯ ಮೇಲೆ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಲ್ಲೆ ನಡೆಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಪಾಲನ್‌ಪುರ ತಾಲೂಕಿನ ಮೋಟಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಸಂತ್ರಸ್ತ ಮತ್ತು ಆತನ ತಾಯಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂತ್ರಸ್ತ ವ್ಯಕ್ತಿ ಜಿಗರ್ ಶೆಖಾಲಿಯಾ ಅವರು ನೀಡಿದ ದೂರಿನ ಆಧಾರದ ಮೇಲೆ ಏಳು ಜನರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ. ಒಳ್ಳೆಯ ಬಟ್ಟೆ ಮತ್ತು ಕನ್ನಡಕ ಧರಿಸಿದ್ದಕ್ಕಾಗಿ ಅಸಮಾಧಾನಗೊಂಡ ಸವರ್ಣೀಯ ಗುಂಪು, ಜಿಗರ್‌ ಮತ್ತು ಆತನ ತಾಯಿಗೆ ಹೊಡೆದಿದ್ದಾರೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಮಂಗಳವಾರ ಬೆಳಗ್ಗೆ ಜಿಗರ್‌ ತನ್ನ ಮನೆಯ ಹೊರಗೆ ನಿಂತಿದ್ದಾಗ ಏಳು ಮಂದಿ ಆರೋಪಿಗಳಲ್ಲಿ ಒಬ್ಬಾತ ಅವರ ಬಳಿಗೆ ಬಂದಿದ್ದನು. ದಲಿತ ವ್ಯಕ್ತಿಯನ್ನು ಬಾಯಿಗೆ ಬಂದಂತೆ ಬೈದನು. “ಇತ್ತೀಚಿನ ದಿನಗಳಲ್ಲಿ ನೀನು ತುಂಬಾ ಹಾರಾಡುತ್ತಿದ್ದೀಯ, ನಿನ್ನನ್ನು ಕೊಂದು ಹಾಕುತ್ತೇವೆ” ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಅದೇ ದಿನ ರಾತ್ರಿ ಜಿಗರ್‌ ಅವರು ತಮ್ಮ ಗ್ರಾಮದ ದೇವಸ್ಥಾನದ ಹೊರಗೆ ನಿಂತಿದ್ದಾಗ ರಜಪೂತ ಸರ್‌ನೇಮ್‌ ಇರುವ ಆರು ಮಂದಿ ಆರೋಪಿಗಳು ಜಿಗರ್‌ ಕಡೆಗೆ ಬಂದರು. ಕೋಲುಗಳಿಂದ ಶಸ್ತ್ರಸಜ್ಜಿತವಾಗಿದ್ದ ಅವರು, “ನೀನೇಕೆ ಒಳ್ಳೆಯ ಬಟ್ಟೆ ಮತ್ತು ಕೂಲಿಂಗ್ ಕ್ಲಾಸ್ ಹಾಕಿಕೊಳ್ಳುತ್ತೀಯಾ?” ಎಂದು ಪ್ರಶ್ನಿಸಿ ಥಳಿಸಿದ್ದಾರೆ. ನಂತರ ಡೈರಿ ಪಾರ್ಲರ್‌ ಕಡೆಗೆ ಎಳೆದೊಯ್ದಿದ್ದಾರೆ.

ತಮ್ಮ ಮಗನನ್ನು ರಕ್ಷಿಸಲು ತಾಯಿ ಧಾವಿಸಿದಾಗ ಆಕೆಯ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ. ದುಷ್ಕರ್ಮಿಗಳು ಸಂತ್ರಸ್ತರ ಬಟ್ಟೆಗಳನ್ನು ಹರಿದು ಹಾಕಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏಳು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗಧ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಗಲಭೆ, ಕಾನೂನುಬಾಹಿರ ಸಭೆ, ಮಹಿಳೆಯ ನಮ್ರತೆ ಕೆರಳಿಸುವುದು, ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು, ನಿಂದನೀಯ ಭಾಷೆ ಬಳಸುವುದು ಇತ್ಯಾದಿ ಆರೋಪಗಳನ್ನು ಆರೋಪಿಗಳ ವಿರುದ್ಧ ಹೊರಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *