ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ದ್ವಿತೀಯ ಸ್ಥಾನ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಂಗಳೂರು: ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ದ್ವಿತೀಯ ಸ್ಥಾನ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ್ತಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಾಲಿಯತ್ (24) (saliyat)ಮೃತ ಆಟಗಾರ್ತಿ. ಬೆಳ್ತಂಗಡಿ ತಾಲೂಕಿನ ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿ ಆದಂ ಮತ್ತು ಹವ್ವಮ್ಮ ದಂಪತಿಯ ಪುತ್ರಿಯಾಗಿರುವ ಸಾಲಿಯತ್ ಅವರು ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ಪತಿಯ ಮನೆ ಚಿಕ್ಕಮಗಳೂರಿನಲ್ಲಿದ್ದು, ಅಲ್ಲಿಯೇ ನೆಲೆಸಿದ್ದರು. ಸಾಲಿಯತ್ ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ, ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಬುಧವಾರ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ತಂದೆ, ತಾಯಿ ಹಾಗೂ ಪತಿಯನ್ನು ಸಾಲಿಯತ್ ಅವರು ಅಗಲಿದ್ದಾರೆ.
ಸಾಲಿಯತ್ ಕ್ರೀಡಾ_ಸಾಧನೆ
ಸಾಲಿಯತ್ ಅವರು ರಾಷ್ಟ್ರಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿಯಾಗಿದ್ದರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡಂಗಡಿಯಲ್ಲಿ, ಉಜಿರೆಯ ಎಸ್.ಡಿ.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ 9 ತರಗತಿ ಹಾಗೂ 10ನೇ ತರಗತಿಯ ಶಿಕ್ಷಣವನ್ನು ಮುಂಡಾಜೆಯಲ್ಲಿ ಪೂರ್ಣಗೊಳಿಸಿದರು. ಉಜಿರೆ ಎಸ್.ಡಿ.ಎಂನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆದರು. ಪದವಿ ಶಿಕ್ಷಣ ಕಲಿಯುತ್ತಿರುವಾಗಲೇ ಸಾಲಿಯತ್ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಿದ್ದರು.
ಸಾಲಿಯತ್ ಅವರು ಹೈದರ್ ಪಡಂಗಡಿ ಅವರ ಗರಡಿಯಲ್ಲಿ ಆರಂಭದ ತರಬೇತಿ ಪಡೆದಿದ್ದರು. ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ.ಎಸ್. ಅವರ ಗರಡಿಯಲ್ಲಿ ಪಳಗಿದ್ದರು
ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ದ್ವಿತೀಯ ಸ್ಥಾನ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಾಲಿಬಾಲ್ ಆಟದಲ್ಲಿ ಅತ್ಯಂತ ಉತ್ಕೃಷ್ಟ ಪ್ರದರ್ಶನ ನೀಡಿದ್ದರು. ರಾಷ್ಟ್ರದ ವಾಲಿಬಾಲ್‌ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್ ನಲ್ಲಿ ತೃತೀಯ ಸ್ಥಾನ ಗಳಿಸಿದ್ದರು.