ಬಾಲ್ಯದಲ್ಲಿ ನೀವಾಡುತ್ತಿದ್ದ ಗೊಂಬೆಗಳನ್ನು ಅಟ್ಟದ ಮೇಲಿಂದ ತೆಗೆದು ನೆನಪಿನ ಹಾದಿಯಲ್ಲಿ ನಡೆಯಲು ಇದೊಂದು ಸದಾವಕಾಶ, ಜೊತೆಗೆ ಆ ಆಟಿಕೆಗಳನ್ನು ನಿಮ್ಮ ರೀತಿಯಲ್ಲಿ ಬಳಸುವ ಇತರರಿಗೆ ನೀಡುವ ಮೂಲಕ, ಈ ದಿವನ್ನು ಸುಂದರವಾಗಿಸಿ.

World Doll Day 2023: ವಿಶ್ವ ಗೊಂಬೆ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ!

ಸಾಂದರ್ಭಿಕ ಚಿತ್ರ

ಗೊಂಬೆ ಪ್ರಿಯರಿಗೆ ಇದು ವಿಶೇಷ ದಿನ. ಈ ದಿನ ಶಾಂತಿ, ಪ್ರೀತಿ ಮತ್ತು ಸಂತೋಷದ ಸಾರ್ವತ್ರಿಕ ಸಂದೇಶವನ್ನು ನೀಡುತ್ತದೆ. ಇದನ್ನು ಸಾಮಾನ್ಯವಾಗಿ ಪ್ರತಿವರ್ಷ ಜೂನ್ ತಿಂಗಳ ಎರಡನೇ ಶನಿವಾರದಂದು ಆಚರಿಸಲಾಗುತ್ತದೆ. ಹಾಗಾಗಿ ಈ ಭಾರಿ ವಿಶ್ವ ಗೊಂಬೆ ದಿನವನ್ನು ಜೂನ್ 10 ರಂದು ಆಚರಣೆ ಮಾಡಲಾಗುತ್ತಿದೆ.

ವಿಶ್ವ ಗೊಂಬೆ ದಿನದ ಇತಿಹಾಸ

1986ರಲ್ಲಿ ವಿಶ್ವ ಡಾಲ್ ದಿನವನ್ನು ಮಿಲ್ಡ್ರೆಡ್ ಸೀಲೆ ಆಚರಿಸಲು ಕರೆಕೊಟ್ಟರು. ಅದಕ್ಕೂ ಮಿಗಿಲಾಗಿ ಗೊಂಬೆಗಳು ಸಾವಿರಾರು ವರ್ಷಗಳಿಂದ ಮಾನವ ನಾಗರಿಕತೆಯ ಒಂದು ಭಾಗವಾಗಿದೆ. ಪುರಾತತ್ವ ಪುರಾವೆಗಳು ಹೇಳುವ ಪ್ರಕಾರ ಇದು ಅತ್ಯಂತ ಹಳೆಯ ಆಟಿಕೆ ಎಂದು ಸೂಚಿಸುತ್ತವೆ. ಆರಂಭಿಕ ಗೊಂಬೆಗಳನ್ನು ಜೇಡಿಮಣ್ಣು, ಕಲ್ಲು, ಮರ, ಮೂಳೆ, ದಂತ, ಚರ್ಮ, ಮೇಣ ಮತ್ತು ಇತರ ಲಭ್ಯವಿರುವ ವಸ್ತುಗಳಿಂದ ತಯಾರಿಸಲಾಗುತ್ತಿತ್ತು ಎಂಬುದು ತಿಳಿದು ಬಂದಿದೆ. ಅಲ್ಲದೆ ಮರದ ಗೊಂಬೆಗಳು ಕ್ರಿ.ಪೂ 21 ನೇ ಶತಮಾನದಷ್ಟು ಹಿಂದಿನ ಈಜಿಪ್ಟ್ ಸಮಾಧಿಗಳಲ್ಲಿ ಕಂಡು ಬಂದಿವೆ. ಜೊತೆಗೆ ಪ್ರಾಚೀನ ಗ್ರೀಕ್ ಮತ್ತು ರೋಮನ್ ಮಕ್ಕಳ ಸಮಾಧಿಗಳಲ್ಲಿ ಜೇಡಿಮಣ್ಣಿನ ಗೊಂಬೆಗಳು ಕಂಡು ಬಂದಿಡೇ ಎಂದು ವರದಿ ತಿಳಿಸಿದೆ. ಇಂದಿನ ಮಕ್ಕಳಂತೆ, ರೋಮನ್, ಗ್ರೀಕ್ ಮತ್ತು ಈಜಿಪ್ಟ್ ಮಕ್ಕಳು ತಮ್ಮ ಗೊಂಬೆಗಳನ್ನು ಇತ್ತೀಚಿನ ಫ್ಯಾಷನ್ ಗಳಿಗೆ ಅನುಗುಣವಾಗಿ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.

ಜೊತೆಗೆ ರಾಗ್ಡಾಲ್ ಗಳನ್ನು ಸಾಂಪ್ರದಾಯಿಕವಾಗಿ ಬಟ್ಟೆಯ ಬಿಡಿ ತುಣುಕುಗಳಿಂದ ಮನೆಯಲ್ಲಿ ತಯಾರಿಸಲಾಗುತ್ತದೆ. ಕ್ರಿ.ಶ. 5 ನೇ ಶತಮಾನಕ್ಕೆ ಸೇರಿದ ರಾಗ್ಡೊಲ್ ಗಳು ಈಗ ಗ್ರೇಟ್ ಬ್ರಿಟನ್ ಎಂದು ಕರೆಯಲ್ಪಡುವ ರೋಮನ್ ಸಾಮ್ರಾಜ್ಯದ ಭಾಗದಲ್ಲಿ ಕಂಡುಬಂದಿವೆ. ಆಧುನಿಕ ಕಾಲದಲ್ಲಿ, ಮಾಟೆಲ್ನ ಬಾರ್ಬಿ ವಿಶ್ವದ ಅತ್ಯಂತ ಜನಪ್ರಿಯ ಗೊಂಬೆಗಳಲ್ಲಿ ಒಂದಾಗಿದೆ. 1959 ರಲ್ಲಿ ಮೊದಲ ಬಾರಿಗೆ ರಚಿಸಲಾದ ಬಾರ್ಬಿ ಗೊಂಬೆಯು ವಿವಿಧ ಆಕಾರಗಳು, ಬಣ್ಣಗಳು ಮತ್ತು ಗಾತ್ರಗಳಲ್ಲಿ ಹೊರಬರುವ ಮೂಲಕ ಹಲವಾರು ಮಾರುಕಟ್ಟೆಗಳಿಗೆ ಹೊಂದಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದೆ. ವಿಶ್ವದಾದ್ಯಂತ ಮಕ್ಕಳ ಅಭಿವೃದ್ಧಿಗೆ ಮತ್ತು ಒಟ್ಟಾರೆಯಾಗಿ ಮಾನವೀಯತೆಯ ಅಭಿವೃದ್ಧಿಗೆ ಗೊಂಬೆಗಳು ನೀಡಿದ ಅಪಾರ ಕೊಡುಗೆಗಳನ್ನು ಆಚರಿಸಲು ವಿಶ್ವ ಗೊಂಬೆ ದಿನವನ್ನು ಆಚರಿಸಲಾಗುತ್ತದೆ.

ದಿನವನ್ನು ಹೇಗೆ ಆಚರಿಸುವುದು?

ಯಾರಿಗಾದರೂ ಗೊಂಬೆಗಳನ್ನು ನೀಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ನಿಮಗಿಷ್ಟ ವಾಗುವ ಗೊಂಬೆಗಳನ್ನು ಖರೀದಿಸಿ ಮತ್ತು ಅವುಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ನೀಡುವ ಮೂಲಕ ಈ ದಿನವನ್ನು ಆಚರಿಸಿ. ನಿಮಗೆ ಗೊಂಬೆಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ, ನಿಮ್ಮ ಪ್ರೀತಿ ಮತ್ತು ಕಾಳಜಿಯನ್ನು ಮಕ್ಕಳು ಅಥವಾ ವಯಸ್ಕರ ಜೊತೆ ಯಾವ ರೀತಿಯಲ್ಲಿ ಹಂಚಿಕೊಳ್ಳಲು ಸಾಧ್ಯವೋ ಆ ರೀತಿಯಲ್ಲಿ ವ್ಯಕ್ತಪಡಿಸುವ ಮೂಲಕ ನೀವು ಈ ದಿನವನ್ನು ಆಚರಿಸಬಹುದು.

ಅಥವಾ ನೀವು ಉಪಯೋಗಿಸಿ ಇನ್ನು ಉತ್ತಮ ಸ್ಥಿತಿಯಲ್ಲಿರುವ ಕೆಲವು ಗೊಂಬೆಗಳು ಅಥವಾ ಇತರ ಆಟಿಕೆಗಳು ಮನೆಯಲ್ಲಿ ಇದ್ದಲ್ಲಿ ಅವುಗಳನ್ನು ಅನಾಥಾಶ್ರಮ, ಮಕ್ಕಳ ದತ್ತಿ ಸಂಸ್ಥೆಗಳು ಅಥವಾ ಮಕ್ಕಳ ಆಸ್ಪತ್ರೆಗಳಿಗೆ ದಾನ ಮಾಡಬಹುದು, ವಿಶೇಷವಾಗಿ ವಿಶ್ವದ ಬಡ ದೇಶಗಳಲ್ಲಿ ನಾವು ಲಘುವಾಗಿ ಪರಿಗಣಿಸುವ ಆಟಿಕೆಗಳು ಐಷಾರಾಮಿಯಾಗಿರುತ್ತವೆ. ನಾವು ಅದನ್ನು ಕಡೆಗಣಿಸಿರುತ್ತೇವೆ ಆದರೆ ಅವರಿಗೆ ಅದೆಷ್ಟು ಸಂತೋಷ ಕೊಡಬಹುದು ಎಂಬುದನ್ನು ಕೂಡ ನೀವು ಬೇರೆಯವರಿಗೆ ನೀಡುವ ಮೂಲಕ ನೋಡಬಹುದಾಗಿದೆ. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳುವುದಷ್ಟೇ ಈ ದಿನದ ವಿಶೇಷ. ಅದರ ಜೊತೆಯಲ್ಲಿ ಇತರರನ್ನು ಸಂತೋಷ ಪಡಿಸಿ ಮತ್ತು ಈ ದಿನವನ್ನು ವಿಶೇಷವನ್ನಾಗಿ ಮಾಡಿ. ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಈ ದಿನ ನಿಮ್ಮ ಅನುಭವವನ್ನು #World Doll Day ಹ್ಯಾಶ್ ಟ್ಯಾಗ್ ನೊಂದಿಗೆ ಹಂಚಿಕೊಳ್ಳಿ ಮತ್ತು ಇತರರಿಗೆ ಈ ದಿನದ ಬಗ್ಗೆ ಅರಿವು ಮೂಡಿಸಿ.

Leave a Reply

Your email address will not be published. Required fields are marked *