ಶೇರ್ ಮಾರ್ಕೆಟ್​ನಲ್ಲಿ ಹಣ ಹಾಕಿ ಮೂರೇ ತಿಂಗಳಿಗೆ ಡಬಲ್ ಮಾಡಿ ಕೊಡುತ್ತೇವೆ ಎಂದು ಹೇಳಿ‌ ಅನೇಕರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಗ್ಯಾಂಗ್​ನ್ನ ಪೊಲೀಸರು ಬಂಧಿಸಿದ್ದು, ಕೊಟ್ಟ ದುಡ್ಡು ವಾಪಾಸ್​ ಕೇಳಲು ಬಂದಾಕೆಯನ್ನೇ ಕಿಡ್ನಾಪ್​ ಮಾಡಲು ಯತ್ನಿಸಿದ್ದಾರೆ.

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ಕೆಲ ಜೋರಾಗಿ ನಡೆಯುತ್ತಿದೆ. ಶೇರ್ ಮಾರ್ಕೆಟ್​(Share Market)ನಲ್ಲಿ ದುಡ್ಡು ಹಾಕಿ, ಮೂರೇ ತಿಂಗಳಿಗೆ ಡಬಲ್ ಮಾಡಿ ಕೊಡುತ್ತೇವೆ ಎಂದು ಹೇಳಿ‌ ಅನೇಕರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಗ್ಯಾಂಗ್​ನ್ನ ಪೊಲೀಸರು ಬಂಧಿಸಿದ್ದಾರೆ. ಹೌದು ಜಿಲ್ಲೆಯ ಅಫಜಲಪುರ (Afzalpur) ತಾಲೂಕಿನ ಗೌಡಗಾಂವ್ ಗ್ರಾಮದ ನಿವಾಸಿಗಳಾದ ಮಂಗಳಾ ಮತ್ತು ಮಹೇಶ್ ಎನ್ನುವ ದಂಪತಿಯಿಂದ‌ ವಂಚನೆ ಆರೋಪ ಕೇಳಿಬಂದಿದೆ. ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಎಫ್​ಡಿ‌ಎ ಆಗಿ ಮಂಗಳಾ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಶೇರ್ ಮಾರ್ಕೆಟ್ ದಂಧೆಯನ್ನು ಮಾಡುತ್ತಾ ಜನರಿಗೆ ವಂಚಿಸುತ್ತಿದ್ದರು.

ಹಣ ಕೇಳಲು ಹೋಗಿದ್ದ ಮಹಿಳೆಯನ್ನೇ ಅಪಹರಿಸಿಕೊಂಡು ಹೋಗಲು ಮುಂದಾಗಿದ್ದ ಮಂಗಳಾ

ಇನ್ನು ನಿನ್ನೆ(ಜೂ.26) ಸಂಜೆ ಕಲಬುರಗಿ ನಗರದ ಸಾವಿತ್ರಿ ಎನ್ನುವ ಮಹಿಳೆ, ಆರೋಪಿ ಮಂಗಳಾಗೆ 21 ಲಕ್ಷ ‌ಹಣವನ್ನ ಕೊಟ್ಟಿದ್ದರಂತೆ. ಅನೇಕ ತಿಂಗಳಾದರೂ ಕೂಡ ಹಣ ಮರಳಿ ನೀಡಿರಲಿಲ್ಲ. ಇದೇ ಕಾರಣಕ್ಕೆ ಸಾವಿತ್ರಿ, ಮಂಗಳಾ ಕೆಲಸ ನಿರ್ವಹಿಸುವ ಶಾಲೆ ಬಳಿ ಹೋಗಿದ್ದಾಳೆ. ಈ ವೇಳೆ ಏಕಾಎಕಿ ಮಂಗಳಾ ಮತ್ತು ಆಕೆಯ ಗ್ಯಾಂಗ್ ಸಾವಿತ್ರಿಯನ್ನೇ ಅಪಹರಣ ಮಾಡಿಕೊಂಡು ಹೋಗಲು ಮುಂದಾಗಿದ್ದರು. ತಾವು ಪೊಲೀಸರು ಎಂದು ಹೇಳಿ ಆರೋಪಿಗಳಾದ ರಾಜಕುಮಾರ್​ ಮತ್ತು ದಯಾನಂದ್ ಇಬ್ಬರು ಸಾವಿತ್ರಿಗೆ ಬೆದರಿಸಿದ್ದರು. ತನ್ನ ಬಳಿಯಿದ್ದ ಲೈಸೆನ್ಸ್ ಪಿಸ್ತೂಲ್​ನಿಂದ ದಯಾನಂದ್ ಬೆದರಿಕೆ ಹಾಕಿದ್ದ.

ಆರೋಪಿಗಳು ಅರೆಸ್ಟ್​

ಈ ವಿಷಯ ತಿಳಿಯುತ್ತಿದ್ದಂತೆ ಸಾವಿತ್ರಿ ಪುತ್ರ ಆಗಮಿಸಿ, ಮಂಗಳಾ ಮತ್ತು ಸಾವಿತ್ರಿಯಿದ್ದ ಕಾರ್​ನ್ನು ಕಲಬುರಗಿ ನಗರದ ಹೈಕೋರ್ಟ್ ಬಳಿ ಅಡ್ಡಗಟ್ಟಿ ತಡೆದಿದ್ದ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಂಗಳಾ, ರಾಜಕುಮಾರ, ದಯಾನಂದ್, ನಭಿಸಾಬ್​ರನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *