Bengaluru news: ದುಷ್ಕರ್ಮಿಗಳ ಹಲ್ಲೆಯಿಂದ ವಿದ್ಯಾರ್ಥಿ ಸಾವು, ಸ್ಕೂಟರ್​ಗೆ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಮೃತ

Bengaluru news: ದುಷ್ಕರ್ಮಿಗಳ ಹಲ್ಲೆಯಿಂದ ವಿದ್ಯಾರ್ಥಿ ಸಾವು, ಸ್ಕೂಟರ್​ಗೆ ಬಸ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಮೃತ

ಬೆಂಗಳೂರಲ್ಲಿ ಸೋಮವಾರ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳ ಮಾರಕ ಹಲ್ಲೆಗೆ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದರೆ, ಅಪಘಾತದಲ್ಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಇನ್ನೋರ್ವ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಂಗಳೂರು: ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಕಾಲೇಜು ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಪ್ರಕರಣ ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ಸೋಮವಾರ ನಡೆದಿದೆ.

ಸೊಹೇಲ್ (17) ಮೃತಪಟ್ಟ ವಿದ್ಯಾರ್ಥಿ. ಮಂಜುನಾಥ ನಗರದ ಗೌತಮ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ.

ಸೋಮವಾರ ಮಧ್ಯಾಹ್ನ 2.30ರ ಸಮಯಲ್ಲಿ ಕಾಲೇಜು ಸಮೀಪ ವಿದ್ಯಾರ್ಥಿ ನಿಂತಾಗ ವಾಹನದಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಸೊಹೇಲ್ ಎಡಗೈ ಮತ್ತು ತೊಡೆಗೆ ಗಂಭೀರವಾದ ಗಾಯವಾಗಿತ್ತು. ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4.30 ರ ಸುಮಾರಿಗೆ ಮೃತಪಟ್ಟಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಠಾಣೆ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ವಿಶೇಷ ತಂಡವೊಂದನ್ನು ರಚಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಸ್ಕೂಟರ್​​ಗೆ ಬಸ್ ಡಿಕ್ಕಿ; ವಿದ್ಯಾರ್ಥಿನಿ ಸಾವು: ಸ್ಕೂಟರ್​ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಪೀಣ್ಯ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಬೆಳಗ್ಗೆ ನಡೆದ ಭೀಕರ ಅಪಘಾತದಲ್ಲಿ 18 ವರ್ಷದ ದಿಶಾ ಸಾವನ್ನಪ್ಪಿದರೆ, ತಂದೆ ಸುರೇಶ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪಿಸಿಎಂ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ದಿಶಾ, ಕಾಲೇಜಿಗೆ ಹೋಗುವ ಸಲುವಾಗಿ ನಾಗಸಂದ್ರದಿಂದ ತಂದೆ ಜೊತೆ ಸ್ಕೂಟರ್​​ನಲ್ಲಿ ಬೆಳಗ್ಗೆ ಸುಮಾರು 6.30ರ ವೇಳೆಗೆ ಜಾಲಹಳ್ಳಿ ಕ್ರಾಸ್ ಬಳಿ ಬರುತ್ತಿದ್ದರು. ಧರ್ಮಸ್ಥಳದಿಂದ ನಗರದ ಕಡೆಗೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಸ್ಕೂಟರ್​ಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿ ತಂದೆ-ಮಗಳು ಕೆಳಗೆ ಬಿದ್ದಿದ್ದಾರೆ. ಅಪಘಾತದಲ್ಲಿ ದಿಶಾ ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ದಿಶಾ ಮೃತಪಟ್ಟಿದ್ದಾರೆ. ಅದೃಷ್ಣವಶಾತ್ ತಂದೆ ಬಚಾವ್ ಆಗಿದ್ದಾರೆ. ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖಿನ್ನತೆಗೊಳಗಾಗಿ ನಾಯಿ ಬೆಲ್ಟ್​​ನಿಂದ ಯುವಕ ಆತ್ಮಹತ್ಯೆ: ಜೀವನದಲ್ಲಿ ಜುಗುಪ್ಸೆಗೊಂಡ ಯುವಕನೋರ್ವ ಸಾಕಿದ ನಾಯಿಗೆ ಕಟ್ಟಿದ್ದ ಬೆಲ್ಟ್​ನಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಕೊ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಭೌಮನಗರದಲ್ಲಿ ನಡೆದಿದೆ. ಆರ್ಯಮಾನ್ ಘೋಷ್ (22) ಆತ್ಮಹತ್ಯೆಗೆ ಶರಣಾದ ಯುವಕ. ಅಪಾರ್ಟ್ಮೆಂಟ್​​ನ ಬಾಡಿಗೆ ಪ್ಲಾಟ್​​ನಲ್ಲಿ ವಾಸವಾಗಿದ್ದ ಯುವಕ, ಜೊತೆಗೆ ನಾಯಿ ಸಾಕಿಕೊಂಡಿದ್ದ. ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ ಆರ್ಯಮಾನ್, ಇತ್ತೀಚೆಗೆ ಖಿನ್ನತೆಗೆ ಒಳಗಾದವನಂತೆ ಕಂಡುಬರ್ತಿದ್ದನಂತೆ. ಸಾಯುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ನನ್ನ ಸಾವಿಗೆ ನಾನೇ ಕಾರಣ, ಐಯ್ಯಾಮ್ ಸಾರಿ ಎಂದು ಬರೆದಿದ್ದಾನೆ. ಮೈಕೊಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Latest News