ಸೋಮವಾರ ರಾತ್ರಿ ಸುರಿದ ಜೋರು ಮಳೆಗೆ ಗುಬ್ಬಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಸಂಪೂರ್ಣ ಜಲಾವೃತಗೊಂಡು ಕೆಳಂತಸ್ತಿನ ಒಳ ರೋಗಿಗಳ ವಾರ್ಡ್‌ನಲ್ಲಿದ್ದ ರೋಗಿಗಳು ಪರದಾಡಿದ ಘಟನೆ ನಡೆದಿದೆ.

ರಾತ್ರಿ 8 ಗಂಟೆಯ ಸಮಯದಲ್ಲಿ ಆರಂಭವಾದ ಮಳೆ ಒಂದೇ ವೇಗದಲ್ಲಿ ಸುರಿದು ಹೆದ್ದಾರಿ ಬದಿಯ ತಗ್ಗು ಪ್ರದೇಶದ ಸರ್ಕಾರಿ ಸಮುದಾಯ ಆಸ್ಪತ್ರೆಗೆ ಮಳೆ ನೀರು ಹರಿದಿದೆ.

ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಪ್ರತಿ ನಿಮಿಷಕ್ಕೆ ಹೆಚ್ಚಾದ ನೀರು ಅರ್ಧ ಗಂಟೆಯಲ್ಲಿ ಮೊದಲ ಅಂತಸ್ತಿನ ಕಟ್ಟಡ ತುಂಬಾ ನೀರು ಶೇಖರಣೆಯಾಗಿದೆ. ತಕ್ಷಣಕ್ಕೆ ಆತಂಕ ಮೂಡಿಸಿದ ಮಳೆ ನೀರು ನೋಡ ನೋಡುತ್ತಿದ್ದಂತೆ ಒಳ ರೋಗಿಗಳ ವಾರ್ಡ್ ಗಳತ್ತ ಹರಿದು ನಂತರ ಐಸಿಯು ಘಟಕದತ್ತ ನೀರು ಹರಿದಿದೆ.

ಒಳ ರೋಗಿಗಳ ದಾಖಲಾತಿ ಪ್ರಕಾರ 11 ಪುರುಷರು, 5 ಮಂದಿ ಮಹಿಳಾ ರೋಗಿಗಳನ್ನು ಮೇಲಂತಸ್ತಿಗೆ ಶಿಫ್ಟ್ ಮಾಡಿದ ಸಿಬ್ಬಂದಿ ತಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಬೆಳಗ್ಗೆ ಮಳೆ ನೀರು ಹೊರ ಹಾಕುವ ಕೆಲಸ ಮಾಡಲಾಯಿತು

100 ಹಾಸಿಗೆಯ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಎನ್ನುವ ಅಂಶಕ್ಕೆ ಕಳಂಕವಾಗಿ ಮಳೆ ನೀರು ವ್ಯವಸ್ಥಿತವಾಗಿ ಹರಿಸುವ ಚರಂಡಿ ಇಲ್ಲದಿರುವುದು ವಿಪರ್ಯಾಸ. ಒಳ ಹೊಕ್ಕ ನೀರು ನಮಗೆ ಭಯ ತಂದಿತು ಎಂದು ರೋಗಿಗಳ ಜೊತೆ ಇದ್ದ ಸಂಬಂಧಿಕರ ಅಳಲು ತೋಡಿಕೊಂಡರು.

ಹೆದ್ದಾರಿ ರಸ್ತೆಗಿಂತ ತಗ್ಗಿನಲ್ಲಿ ಆಸ್ಪತ್ರೆಯ ಕಟ್ಟಡ ಇದ್ದು, ಈ ಹಿಂದೆ ರಸ್ತೆಯಲ್ಲಿ ಹರಿಯುವ ನೀರು ಆಸ್ಪತ್ರೆಯ ಅವರಣಕ್ಕೆ ಬರುತ್ತಿತ್ತು. ಇದರ ನಿಯಂತ್ರಣಕ್ಕೆ ಕೆಲ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರೂ ಜೋರು ಮಳೆಗೆ ಇಡೀ ಕಟ್ಟಡ ಜಲ ದಿಗ್ಬಂಧನಕ್ಕೆ ಒಳಗಾಯಿತು. ತಗ್ಗು ಪ್ರದೇಶದ ಕಟ್ಟಡಕ್ಕೆ ಮಳೆ ನೀರು ಬಾರದಂತೆ ಕೂಡಲೇ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *