ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ‘ಗ್ಯಾರಂಟಿ ಯೋಜನೆ’ಯನ್ನು (guarantee scheme) ಜಾರಿಗೊಳಿಸುವ ಪರಮಾಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಸಚಿವರು ನೀಡಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ‘ಗ್ಯಾರಂಟಿ ಯೋಜನೆ’ಯನ್ನು (guarantee scheme) ಜಾರಿಗೊಳಿಸುವ ಪರಮಾಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಸಚಿವರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಚಿವ ಸಂಪುಟ ಸಭೆ ನಡೆಸಿ 200 ಯೂನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೇರಿದಂತೆ ಐದು ಯೋಜನೆಗಳ ಅನುಷ್ಠಾನ ಕುರಿತು ಚರ್ಚಿಸಿದರು. ಸಭೆಯಲ್ಲಿ ಮಾತನಾಡಿದ ಸಚಿವರು, ಲೋಕಸಭೆ ಚುನಾವಣೆ ಹಿನ್ನೆಲೆಯನ್ನು ‌ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ, ಇಲಾಖಾವಾರು ಅನುದಾನ ಖೋತಾ ಆಗುವ ಸಂಭವದ ಬಗ್ಗೆಯೂ ಚರ್ಚೆ ನಡೆದಿದೆ. ಕಾಲಾವಕಾಶ ಪಡೆದುಕೊಂಡು ಯೋಜನೆಗಳನ್ನು ಜಾರಿ ಮಾಡಿ. ಸಾಲದ ಮರುಪಾವತಿ ಅವಧಿ ವಿಸ್ತರಣೆ ಮಾಡಿಕೊಳ್ಳಬಹುದು ಎಂದು ಸಚಿವರು ಸಲಹೆ ನೀಡಿದರು.

ಈ ಮಧ್ಯೆ, ಐದು ‘ಗ್ಯಾರಂಟಿ ಯೋಜನೆ’ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಗುರುವಾರ ನಿಗದಿಯಾಗಿದ್ದ ಮಹತ್ವದ ಸಂಪುಟ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.

ಈ ಯೋಜನೆಗಳಿಗೆ ಸಂಬಂಧಿಸಿದ ಬಹುತೇಕ ಎಲ್ಲ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ. ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದರು. ಆದರೆ ಸಭೆ ಶುಕ್ರವಾರಕ್ಕೆ ಮುಂದೂಡಲಾಗಿದೆ.

ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಇನ್ನೂ ಒಮ್ಮತಕ್ಕೆ ಬರದ ಕಾರಣ ಸಿಎಂ ಸಂಪುಟ ಸಭೆಯನ್ನು ಮುಂದೂಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸುವ ಮುನ್ನ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸುವ ನಿರೀಕ್ಷೆ ಇದೆ. ಈಗಾಗಲೇ ಅಧಿಕಾರಿಗಳ ಜತೆ ಸಿಎಂ ಎರಡು ಸುತ್ತಿನ ಸಭೆ ನಡೆಸಿದ್ದಾರೆ.

ಯಾವುದೇ ಷರತ್ತುಗಳಿಲ್ಲದೆ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸರ್ಕಾರ ಘೋಷಿಸಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈಗಾಗಲೇ ಸುಳಿವು ನೀಡಿದ್ದಾರೆ.

ಏತನ್ಮಧ್ಯೆ, ಯೋಜನೆಗಳ ಅನುಷ್ಠಾನ ವಿಳಂಬದ ಬಗ್ಗೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಪ್ರಶ್ನಿಸುತ್ತಿವೆ.

ಗ್ಯಾರಂಟಿಗಳನ್ನು ಜಾರಿ ಮಾಡುವುದು ಗ್ಯಾರಂಟಿ ಎಂದ ಸಿಎಂ

5 ಗ್ಯಾರಂಟಿಗಳನ್ನು ಜಾರಿ ಮಾಡುವುದು ಖಂಡಿತಾ ಎಂದು ಸಿದ್ದರಾಮಯ್ಯ ಹೇಳಿದರು. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ನಿಗದಿಯಾಗಿದೆ. 5 ಗ್ಯಾರಂಟಿಗಳ ಜಾರಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡ್ತೇವೆ. ಇಂದಿನ ಸಭೆಯಲ್ಲಿ ಗ್ಯಾರಂಟಿ ಜಾರಿಗೆ ತೀರ್ಮಾನ ಮಾಡಿಲ್ಲ. ಇಂದಿನ ಸಭೆಯಲ್ಲಿ ಗ್ಯಾರಂಟಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ಸಂಪುಟ ಸಭೆಯಲ್ಲಿ ಗ್ಯಾರಂಟಿ ಬಗ್ಗೆ ಚರ್ಚೆ ಮಾಡ್ತೇವೆ ಎಂದು ಸಚಿವರ ಜತೆ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Leave a Reply

Your email address will not be published. Required fields are marked *