ಸಾಗರದ ವಸತಿ ಶಾಲೆ ಬಾಲಕಿ ಅನುಮಾನಾಸ್ಪದ​​ ಸಾವು ಪ್ರಕರಣ: ಪೊಕ್ಸೋ ಕೇಸ್​ನಡಿ ವಸತಿ ಶಾಲೆ ಮುಖ್ಯಸ್ಥನ ಬಂಧನ

ಸಾಗರದ ವಸತಿ ಶಾಲೆ ಬಾಲಕಿ ಅನುಮಾನಾಸ್ಪದ​​ ಸಾವು ಪ್ರಕರಣ: ಪೊಕ್ಸೋ ಕೇಸ್​ನಡಿ ವಸತಿ ಶಾಲೆ ಮುಖ್ಯಸ್ಥನ ಬಂಧನ

ಜೂನ್​ 8 ರಂದು ವಾಂತಿ, ಭೇದಿಯಾಗಿ ಸಾಗರದ ವಸತಿ ಶಾಲಾ ಬಾಲಕಿ ಸಾವನ್ನಪ್ಪಿದ್ದಳು. ಬಾಲಕಿ ಸಾವಿಗೆ ಸಂಬಂಧಿಸಿ ಶಾಲೆಯ ಮುಖ್ಯಸ್ಥ ಮಂಜಪ್ಪನನ್ನು ಪೊಕ್ಸೋ ಪ್ರಕರಣದಡಿ ಬಂಧಿಸಲಾಗಿದೆ.

ಶಿವಮೊಗ್ಗ: ಸಾಗರದ ವಸತಿ ಶಾಲೆಯಲ್ಲಿ 13 ವರ್ಷ ವಯಸ್ಸಿನ ಬಾಲಕಿ ಜೂನ್ 8 ರಂದು ಶಾಲೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಾವನ್ನಪ್ಪಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿ ವಸತಿ ಶಾಲೆಯ ಮುಖ್ಯಸ್ಥ ಮಂಜಪ್ಪ ಎಂಬುವವರನ್ನು ಪೊಕ್ಸೋ ಪ್ರಕರಣದಡಿ ಬಂಧಿಸಲಾಗಿದೆ. ಮೃತ ಬಾಲಕಿಯ ಚಿಕ್ಕಮ್ಮ ಹಾಗೂ ಆಕೆಯ ಜೊತೆ ಶಾಲೆಯಲ್ಲಿದ್ದ ಮಕ್ಕಳಿಬ್ಬರ ಹೇಳಿಕೆಯ ಮೇರೆಗೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆಯೇ ಶಾಲೆಯ ಮುಖ್ಯಸ್ಥ ಮಂಜಪ್ಪನನ್ನು ಬಂಧಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 173 (3) ಪೋಕ್ಸೋ ಪ್ರಕರಣ ದಾಖಲಾಗಿದೆ. ಇನ್ನು ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಎಫ್ ಎಸ್ ಎಲ್ ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದದ್ದಾದರು ಏನು?: ಮೃತ ಬಾಲಕಿ ಸೊರಬ ತಾಲೂಕು ಶಿವಪುರ ಗ್ರಾಮದ ನಿವಾಸಿ. ಇವರ ತಂದೆ ಕೃಷಿಕರು. ಮಗಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಲಿ ಎಂದು ಸಾಗರದ ಶಾಲೆಗೆ ಸೇರಿಸಿದ್ದರು. ವಸತಿ ಶಾಲೆಗೆ ಸೇರಿ ಕೇವಲ ಐದು ದಿನಗಳಾಗಿತ್ತು. ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ. ರಾತ್ರಿ ಮಲಗಿದ್ದವರು ಬೆಳಗ್ಗೆ ಕೊಠಡಿಯಿಂದ ಹೊರ ಬಾರದ ಕಾರಣ ಹೋಗಿ ವಿಚಾರಿಸಿದ್ದಾರೆ. ಅಲ್ಲಿ ಹೋದಾಗ ವಾಂತಿ- ಭೇದಿ ಆಗಿರುವುದು ಗಮನಕ್ಕೆ ಬಂದಿದೆ. ವಿದ್ಯಾರ್ಥಿನಿ ಪ್ರಜ್ಞಾಹೀನಳಾಗಿದ್ದಳು. ತಕ್ಷಣವೇ ಸಾಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು.

ಈ ಘಟನೆ ಕುರಿತು ಅಂದಿನ ದಿನ ಪ್ರತಿಕ್ರಿಯಿಸಿದ ವಸತಿ ಶಾಲಾ ಮುಖ್ಯಸ್ಥ ಮಂಜಪ್ಪ, ವಿದ್ಯಾರ್ಥಿನಿ ಐದು ದಿನಗಳ ಹಿಂದೆ ನಮ್ಮ ಶಾಲೆಗೆ ದಾಖಲಾಗಿದ್ದಳು. ಆದರೆ ನಿನ್ನೆ (ಘಟನೆಯ ಹಿಂದಿನ ದಿನ) ಕಾಲು ನೋವೆಂದು ಹೇಳಿದ್ದಾಳೆ. ಅದಕ್ಕೆ ನಾವು ಜೆಲ್​ ಎಣ್ಣೆ ಹಚ್ಚಿ, ಮೈಕೈ ನೋವಿಗೆ ಕೊಡುವಂತಹ ಮೆಣಸಿನಕಾಳು ಸಾರು ಕೊಟ್ಟಿದ್ದೇವೆ.

ಅದನ್ನು ನಾನೂ ಕುಡಿದಿದ್ದೇನೆ. ಜೊತೆಗೆ ಇನ್ನೂ ನಾಲ್ಕು ಮಕ್ಕಳು ಸಾರು ಸೇವಿಸಿದ್ದಾರೆ. ರಾತ್ರಿ ಸಾಂಬರು ಅನ್ನ ಊಟ ಮಾಡಿದ್ದಾಳೆ. ಬೆಳಗ್ಗೆ ಎಲ್ಲರೂ ನೀರು ಕುಡಿಯಲು ಬರಬೇಕು, ಆದರೆ ಈ ಹುಡುಗಿ ನೀರು ಕುಡಿಯಲು ಬಂದಿಲ್ಲ. ಕೇಳಿದಾಗ ಎದ್ದಿಲ್ಲ ಎಂದು ಹೇಳಿದ್ರು. ಹೋಗಿ ನೋಡಿದಾಗ, ಆಕೆ ವಾಂತಿ ಬಂದಂತಾಗುತ್ತಿದೆ ಎಂದು ಹೇಳಿದ್ದಾಳೆ. ಅವಳನ್ನು ಕುರ್ಚಿಯಲ್ಲಿ ಕೂರಿಸಿ, ವಾಂತಿ ಮಾಡಲು ಅವಕಾಶ ಮಾಡಿಕೊಟ್ಟೆವು.”

“ವಾಂತಿ ಮಾಡುವಾಗಲೇ ಅವಳಿಗೆ ಬೇಧಿ ಹಾಗೂ ಮೂತ್ರ ಆಗಿದೆ. ತಕ್ಷಣವೇ ಗೆಳತಿ ಅವಳನ್ನು ಸ್ನಾನ ಮಾಡಿಸಿಕೊಂಡು ಬಂದಿದ್ದಾಳೆ. ಸ್ನಾನದಿಂದ ವಾಪಸಾದ ಮೇಲೆ ಗಂಜಿ ಕೊಟ್ಟಿದ್ದೇವೆ, ಆದರೆ ಅದನ್ನು ತಿನ್ನಲು ಸಾಧ್ಯವಾಗ್ತಿಲ್ಲ, ಸುಸ್ತಾಗ್ತಿದೆ ಎಂದಿದ್ದಾಳೆ. ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ. ಅಲ್ಲಿ ವೈದ್ಯರು ವಿದ್ಯಾರ್ಥಿನಿ ಸಾವನ್ನಪ್ಪಿರುವುದಾಗಿ ಹೇಳಿದರು.

ಅಲ್ಲಿ ವೈದ್ಯರು ಇದು ಕಾರ್ಡಿಯಾಕ್​ ಅರೆಸ್ಟ್​ ಆಗಿರಬಹುದು, ಶವಪರೀಕ್ಷೆ ಆಗುವವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿನಿ ಸಾವು ನಮಗೆ ಸಾಕಷ್ಟು ನೋವುಂಟು ಮಾಡಿದೆ. ಹಾಗೆಯೇ ಅವಳ ಸಾವಿನ ಕುರಿತು ಅನುಮಾನವಿದ್ದು, ಶವ ಪರೀಕ್ಷೆ ನಡೆಸಿದಾಗ ನಮ್ಮ ಅನುಮಾನ ಬಗೆಹರಿಯುತ್ತದೆ. ಈ ಕುರಿತ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ” ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *

Latest News