ಅಮಾಯಕ ಮಕ್ಕಳು ಶಾಲೆ ಹೊರಗೆ ಕೂರುವುದನ್ನು ಕಂಡು ಕೋರ್ಟ್​ ಮೂಕ ಪ್ರೇಕ್ಷಕನಾಗಲು ಸಾಧ್ಯವಿಲ್ಲ: ಹೈಕೋರ್ಟ್

ಅಮಾಯಕ ಮಕ್ಕಳು ಶಾಲೆ ಹೊರಗೆ ಕೂರುವುದನ್ನು ಕಂಡು ಕೋರ್ಟ್​ ಮೂಕ ಪ್ರೇಕ್ಷಕನಾಗಲು ಸಾಧ್ಯವಿಲ್ಲ: ಹೈಕೋರ್ಟ್

ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ನೆಲಮಂಗಲದ ಕಣ್ವ ಪಬ್ಲಿಕ್ ಶಾಲೆಗೆ ಬೀಗ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಲಾ ಕಟ್ಟಡದ ತರಗತಿಯೊಳಗೆ ವಿದ್ಯಾಭಾಸ ಮುಂದುವರಿಸಲು ಅನುಮತಿ ನೀಡುವಂತೆ ಬ್ಯಾಂಕ್​ಗೆ ಹೈಕೋರ್ಟ್ ನಿರ್ದೇಶನ.

ಬೆಂಗಳೂರು: ಪಡೆದ ಸಾಲವನ್ನು ಮರುಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡ ಮತ್ತು ಜಾಗವನ್ನು ಹರಾಜು ಪ್ರಕ್ರಿಯೆಗೆ ಮುಂದಾದ ಪರಿಣಾಮ ಕಟ್ಟಡದ ಹೊರಭಾಗದ ತೆರೆದ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೆಲಮಂಗಲದ ಕಣ್ವ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಕಟ್ಟಡದ ತರಗತಿಯೊಳಗೆ ವಿದ್ಯಾಭಾಸ ಮುಂದುವರಿಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.

ನೆಲಮಂಗಲದಲ್ಲಿ ಕನ್ವ ಎಜುಕೇಷನ್ ಟ್ರಸ್ಟ್ ನಡೆಸುತ್ತಿರುವ ಕಣ್ವ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಪೋಷಕರಾದ ಎಂ.ಆರ್. ಹರೀಶ್, ಸಿದ್ದಪ್ಪ ಮತ್ತು ಮೊಹಮ್ಮದ್ ಹಸೀಬುಲ್ಲಾ ಎಂಬುವರು ತಮ್ಮ ಮಕ್ಕಳಿಗೆ ಆಗುತ್ತಿದ್ದ ತೊಂದರೆ ಗಮನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ.

ಅಲ್ಲದೇ, ಮಕ್ಕಳು ಈ ದೇಶದ ಭವಿಷ್ಯ. ಅವರು ತೆರೆದ ಪ್ರದೇಶದಲ್ಲಿ ಕೂತು ಬಿಸಿಲು ಮತ್ತು ಮಳೆಗೆ ಮೈಯೊಡ್ಡುವಂತಾಗಬಾರದು. ಈಗಾಗಲೇ ಮುಂಗಾರು ಆರಂಭವಾಗಿದೆ. ಅಬ್ಬರದ ಮಳೆ ಭೀತಿಯೊಂದಿಗೆ ತೆರೆದ ಪ್ರದೇಶದಲ್ಲಿ ನೂರಾರು ಅಮಾಯಕ ಮಕ್ಕಳು ಕೂತಿರುವುದನ್ನು ಕಂಡು ನ್ಯಾಯಾಲಯ ಮೂಕ ಪ್ರೇಕ್ಷಕನಂತೆ ಇರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ. ಹೀಗಾಗಿ ಕೂಡಲೇ ಮಕ್ಕಳು ಶಾಲಾ ತರಗತಿಯಲ್ಲಿ ಕೂತು ವಿದ್ಯಾಭ್ಯಾಸ ಮುಂದುವರಿಸಲು ಅನುಮತಿ ನೀಡಬೇಕು ಎಂದು ಬ್ಯಾಂಕಿಗೆ ಮಧ್ಯಂತರ ಆದೇಶದ ಮೂಲಕ ನಿರ್ದೇಶಿಸಿದೆ.

ಜೊತೆಗೆ, ಶಾಲಾ ಆಡಳಿತ ಮಂಡಳಿಯು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಬಾಕಿ ಉಳಿಸಿಕೊಂಡಿರುವ ವೇತನವನ್ನು ಪಾವತಿಸಬೇಕು. ಈ ಆದೇಶದ ಅನುಪಾಲನಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ಇದೇ ವೇಳೆ, ಸಾಲ ವಸೂಲಾತಿ ನಿಟ್ಟಿನಲ್ಲಿ ಭದ್ರತಾ ಖಾತರಿಯಾಗಿ ಕಣ್ವ ಎಜುಕೇಷನ್ ಟ್ರಸ್ಟ್ ಮತ್ತು ಕನ್ವ ಗಾರ್ಮೆಂಟ್ಸ್ ಒದಗಿಸಿರುವ ತುಮಕೂರಿನ ಮತ್ತೊಂದು ಆಸ್ತಿಯನ್ನು ಹರಾಜು ಹಾಗೂ ಮಾರಾಟ ಮಾಡಲು ಬ್ಯಾಂಕ್ ಅಗತ್ಯ ಕ್ರಮ ಜರುಗಿಸಬಹುದು. ಆ ಆಸ್ತಿಯನ್ನು ಹರಾಜು ಹಾಕಿ, ಅದರಿಂದ ಬರುವ ಹಣವನ್ನು ಸಾಲ ಮರುಪಾವತಿಗೆ ವಿನಿಯೋಗಿಸುವವರೆಗೆ ನೆಲಮಂಗಲದ ಕಟ್ಟಡದಿಂದಲೇ ಶಾಲೆ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು ಎಂದು ಪೀಠ ನಿರ್ದೇಶಿಸಿದೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಧ್ಯಂತರ ಕ್ರಮಗಳನ್ನು ಸೂಚಿಸಲಾಗಿದೆ. ಇಂತಹ ಪ್ರಕರಣದಲ್ಲಿ ವಿದ್ಯಾರ್ಥಿಗಳು (ಪೋಷಕರ ಮೂಲಕ) ಸಲ್ಲಿಸಿರುವ ವಿಚಾರಣಾ ಯೋಗ್ಯವೇ? ತಾತ್ಕಾಲಿಕ ಕ್ರಮವಾಗಿ ತರಗತಿಗಳನ್ನು ನಡೆಸುತ್ತಿರುವಾಗ ಶಾಲಾ ಕಟ್ಟಡವನ್ನು ಹರಾಜಿಗೆ ಇಡಬಹುದೇ? ಹೌದಾದರೆ, ಯಾವ ಷರತ್ತಿನೊಂದಿಗೆ ಹರಾಜು ಪ್ರಕ್ರಿಯೆ ನಡೆಸಲು ಅನುಮತಿ ನೀಡಬಹುದು? ಎಷ್ಟು ಕಾಲದವರೆಗೆ ಈ ಮಧ್ಯಂತರ ಕ್ರಮಗಳನ್ನು ಮುಂದುವರಿಸಬಹುದು? ಎಂಬುದು ಸೇರಿ ಇನ್ನಿತರ ವಿಚಾರಗಳ ಕೂರಿತು ಕೂಲಂಕಷವಾಗಿ ಪರಿಶೀಲನೆ ನಡೆಸಬೇಕಿದೆ ಎಂದು ತಿಳಿಸಿ ವಿಚಾರಣೆಯನ್ನು ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್, ಯಾವುದೇ ಮಾಹಿತಿ ನೀಡದೇ 2023ರ ಏ.8ರಂದು ಶಾಲೆಯನ್ನು ಏಕಾಏಕಿ ಮುಚ್ಚಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಶಾಲಾ ಕಟ್ಟಡವನ್ನು ಸಾಲ ವಸೂಲಾತಿ ಕ್ರಮವಾಗಿ ಬ್ಯಾಂಕ್ ಸ್ವಾಧೀನಪಡಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಶಾಲಾ ಕಟ್ಟಡದ ಜೊತೆಗೆ ತುಮಕೂರು ಜಿಲ್ಲೆಯ ಊಡಿಗೆರೆ ಗ್ರಾಮದ 10 ಎಕರೆಯನ್ನು ಸಾಲ ಮರುಪಾವತಿಗೆ ಭದ್ರತಾ ಖಾತರಿ ನೀಡಲಾಗಿದೆ. ಅರ್ಜಿದಾರರ ಪರ ಸಾಲದ ಮೊತ್ತ 9 ಕೋಟಿ ರೂ ಆಗಿದೆ. ಬ್ಯಾಂಕಿನ ಪ್ರಕಾರ 10 ಕೊಟಿ ಸಾಲ ಮರು ಪಾವತಿ ಮಾಡಬೇಕಿದೆ. ತುಮಕೂರಿನ ಆಸ್ತಿಯು ಸುಮಾರು 15 ಕೋಟಿ ರೂ ಬೆಲೆ ಬಾಳುತ್ತದೆ. ಆದರೆ, ಆ ಆಸ್ತಿಗೆ ಕಡಿಮೆ ಮೌಲ್ಯ ನಿಗದಿಪಡಿಸಲಾಗಿದೆ. ಆ ಆಸ್ತಿ ಮಾರಾಟ ಮಾಡಿ ಬಂದ ಹಣವನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಹಾಗಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ ಕಾರ್ಯ ನಿರ್ವಹಣೆಗೆ ಅನುಮತಿ ನೀಡಬೇಕು ಎಂದು ಕೋರಿದರು.

Leave a Reply

Your email address will not be published. Required fields are marked *