ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದಲ್ಲಿನ ಸೊಳ್ಳೆಗಳ ಪರೀಕ್ಷೆ ವೇಳೆ ಮಾರಕ ಝಿಕಾ ವೈರಸ್ (Zika Virus) ಪತ್ತೆಯಾಗಿದ್ದು, ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ.
ಆರಂಭಿಕ ಹಂತದಲ್ಲೇ ಮಾರಕ ವೈರಸ್ಗೆ ಕಡಿವಾಣ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆ ತಲಕಾಯಲಬೆಟ್ಟ ಗ್ರಾಮದ 5 ಕಿಮೀ ವ್ಯಾಪ್ತಿಯಲ್ಲಿರುವ 5 ಗ್ರಾಮಗಳಲ್ಲಿ 31 ಗರ್ಭಿಣಿಯರ ರಕ್ತ ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಿದೆ.
ಇನ್ನೂ ಜೊತೆಯಲ್ಲಿ 4 ಮಂದಿ ಜ್ವರಪೀಡಿತರ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ ಅಂತ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕುಮಾರ್ ತಿಳಿಸಿದ್ದಾರೆ.
ಝಿಕಾ ವೈರಸ್ ರೋಗ ಲಕ್ಷಣಗಳು ಕೆಲ ದಿನಗಳ ಹಿಂದೆಯಷ್ಟೇ ಕೇರಳದ ಕೋಝಿಕೋಡ್ನಲ್ಲಿ ಪತ್ತೆಯಾಗಿದ್ದ ಝಿಕಾ ವೈರಸ್ ಇದೀಗ ಚಿಕ್ಕಬಳ್ಳಾಪುರದಲ್ಲಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ವೈರಸ್ ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ ನೋವು ಲಕ್ಷಣಗಳನ್ನು ಹೊಂದಿದೆ.