Electronic City: ಮುಂದಿನ ಒಂದೆರಡು ನಿಮಿಷಗಳಲ್ಲಿ ಪ್ರತ್ಯಕ್ಷಳಾದ ಹುಡುಗಿ, ಯಾರೋ ಅಪರಿಚಿತ ಕರೆಗಂಟೆ ಬಾರಿಸಿದ, ಬಾಗಿಲು ತೆರೆದಾಗ ಒಳನುಗ್ಗಿ ತನ್ನನ್ನು ಟೆರೇಸಿಗೆ ಎಳೆದುಕೊಂಡು ಹೋದ, ಅವನ ಕೈ ಕಚ್ಚಿ ತಾನು ಪಾರಾಗಿ ಬಂದೆ ಎಂದಿದ್ದಾಳೆ.
ಸೌಜನ್ಯ : ಅಂತರ್ಜಾಲ
Kidnapping: ನಮ್ಮೆಲ್ಲರನ್ನೂ ತಲ್ಲಣಗೊಳಿಸಬೇಕಾದ ಘಟನೆಯೊಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ (Electronic City, Bengaluru) ಬಹುಮಹಡಿ ವಸತಿ ಸಮುಚ್ಚಯದಲ್ಲಿ ಇತ್ತೀಚಿಗೆ ನಡೆದಿದ್ದು ಅದರ ರೋಚಕ ವಿವರಗಳು ವಾಟ್ಸ್ಯಾಪ್ ಗುಂಪುಗಳಲ್ಲೆಲ್ಲ ವ್ಯಾಪಕವಾಗಿ ಹರಿದಾಡುತ್ತಿವೆ. ಪುಟ್ಟ ಹುಡುಗಿಯೊಬ್ಬಳು ತನ್ನ ತುಂಟಾಟಗಳಿಂದ ತನ್ನ ಪಾಲಕರನ್ನು ನೆರೆಹೊರೆಯವರನ್ನು ಆತಂಕಕ್ಕೆ ತಳ್ಳಿದ್ದು, ಪೊಲೀಸರಿಗೆ ಗೊಂದಲವುಂಟುಮಾಡಿದ್ದಲ್ಲದೇ, ಡೆಲಿವರಿ ಏಜೆಂಟ್ಗೆ ವಿನಾಕಾರಣ ಶಿಕ್ಷೆಗೆ ಗುರಿಮಾಡಿದ ಘಟನೆ ಇದಾಗಿದೆ. ಇದರ ವಿವರಗಳನ್ನು ಓದಿದರೆ ಇವು ಬಾಲ್ಯಸಹಜ ಚೇಷ್ಟೆಗಳೋ!? ಎಂಬ ಜಿಜ್ಞಾಸೆ ಉಂಟಾಗುವ ಸಾಧ್ಯತೆ ಇದೆ.
ತಮ್ಮನನ್ನು ಶಾಲೆಗೆ ಬಿಟ್ಟು ಬರುತ್ತೇವೆ, ನೀನು ಮನೆಯಲ್ಲಿಯೇ ಇರು ಎಂದು ಬೆಳಗ್ಗೆ ಒಂಬತ್ತರ ಸುಮಾರಿಗೆ ಶಾಲೆಗೆ ಹೊರಟಿದ್ಧಾರೆ ಎಂಟು ವರ್ಷದ ಬಾಲಕಿಯ ತಂದೆ ತಾಯಿ. ಹದಿನೈದಿಪ್ಪತ್ತು ನಿಮಿಷಗಳ ನಂತರ ಮರಳಿದ ಅವರು ಮನೆಯ ಬಾಗಿಲು ಹೊರಗಿಂದ ಲಾಕ್ ಆಗಿದ್ದನ್ನು ನೋಡಿ ಗಾಬರಿಯಿಂದ ಮಗಳನ್ನು ಹುಡುಕತೊಡಗಿದ್ದಾರೆ. ಇವರೊಂದಿಗೆ ನೆರೆಮನೆಯವರೊಬ್ಬರು ಜೊತೆಯಾಗಿದ್ದಾರೆ. ಮುಂದಿನ ಒಂದೆರಡು ನಿಮಿಷಗಳಲ್ಲಿ ಪ್ರತ್ಯಕ್ಷಳಾದ ಹುಡುಗಿ, ಯಾರೋ ಅಪರಿಚಿತ ಕರೆಗಂಟೆ ಬಾರಿಸಿದ, ಬಾಗಿಲು ತೆರೆದಾಗ ಒಳನುಗ್ಗಿ ತನ್ನನ್ನು ಟೆರೇಸಿಗೆ ಎಳೆದುಕೊಂಡು ಹೋದ, ಅವನ ಕೈ ಕಚ್ಚಿ ತಾನು ಪಾರಾಗಿ ಬಂದೆ’ ಎಂದಿದ್ದಾಳೆ.
ಹುಡುಗಿಯ ಅಪ್ಪ ಮತ್ತು ನೆರೆಯವರು ಸೆಕ್ಯುರಿಟಿಯವರಲ್ಲಿ ವಿಚಾರಿಸಿದಾಗ, ಆ ಸಮಯದಲ್ಲಿ ಒಬ್ಬ ಡೆಲಿವರಿ ಏಜೆಂಟ್ ಒಳಗೆ ಬಂದಿದ್ದು ತಿಳಿದು ಬಂದಿದೆ. ಬಾಲಕಿ ಇವನೇ ಅವನು ಎಂದು ಗುರುತಿಸಿದಾಗ, ಅಲ್ಲಿದ್ದವರು ಅವನಿಗೆ ಏಟು ಕೊಟ್ಟಿದ್ದಾರೆ. ಅಷ್ಟರಲ್ಲಿ ಸುದ್ದಿ ಪೊಲೀಸರಿಗೆ ತಲುಪಿ ಅವರು ತನಿಖೆ ಶುರು ಮಾಡಿದಾಗ CCTVಯಲ್ಲಿ ಆ ಡೆಲಿವರಿ ಏಜೆಂಟ್ ಸಮುಚ್ಚಯದೊಳಗೆ ಬಂದದ್ದೇ 9:40ಕ್ಕೆ ಎಂದು ತಿಳಿದು ಬಂದಿದೆ. ಅವನ ಬೆಂಬಲಕ್ಕೆ ನೂರಾರು ಡೆಲಿವರಿ ಏಜೆಂಟರುಗಳು ಬಂದು ಗೇಟಿನ ಹೊರಗೆ ನೆರೆದಿದ್ದಾರೆ. ಅವರನ್ನು ಚದುರಿಸಿ ಪೊಲೀಸರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಮುಂದೆ ಇನ್ನೊಬ್ಬ ಸಂದೇಹಿತ ವ್ಯಕ್ತಿಯನ್ನು ತನಿಖೆಗೊಳಪಡಿಸಿ ಅವನೂ ನಿರ್ದೋಷಿ ಎಂದು ಸಾಬೀತಾಗಿದೆ.
ಹಾಗಿದ್ದರೆ ಆದದ್ದಾದರೂ ಏನು? ಇದು ಗೊತ್ತಾಗಿರುವುದು ಮರುದಿನ. ಪಕ್ಕದ ಕಟ್ಟಡವೊಂದರ CCTV ತುಣುಕುಗಳನ್ನು ಪರಿಶೀಲಿಸಿದಾಗ, ಹಿಂದಿನ ದಿನ 9ರಿಂದ 9.20ರವರೆಗೆ 8 ವರ್ಷದ ಆ ಹುಡುಗಿ ಟೆರೇಸ್ ಮೇಲೆ ಒಬ್ಬಳೇ ಓಡಾಡುತ್ತ, ಲಿಫ್ಟ್ ಮೂಲಕ ಪಕ್ಕದ ಕಟ್ಟಡಗಳ ಸುತ್ತು ಹೊಡೆಯುತ್ತಿದ್ದಳು. ಆ ಹೊತ್ತಿಗೆ ಮೇಲೆ ಬಂದ ನೆರೆಯವರನ್ನು ಕಂಡಕ್ಷಣ ತನ್ನ ತಂದೆತಾಯಿ ಮರಳಿರಬೇಕು, ತನ್ನನ್ನು ಹುಡುಕುತ್ತಿರಬೇಕು ಎಂಬುದು ಅರಿವಿಗೆ ಬಂದು, ಅಪಹರಣದ ಕತೆ ಕಟ್ಟಿದ್ದಾಳೆ ಎನ್ನುವ ಅನುಮಾನ ಬಾರದೇ ಇರದು.