India vs West Indies: ಟೀಮ್ ಇಂಡಿಯಾದ ಪ್ರಮುಖ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ಗೆ ವಿಂಡೀಸ್ ಪ್ರವಾಸದಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ (WTC Final) ಸೋಲುಂಡ ಬಳಿಕ ಭಾರತ ಕ್ರಿಕೆಟ್ ತಂಡದ ಆಟಗಾರರು ತವರಿಗೆ ಮರಳಿ ವಿಶ್ರಾಂತಿಯಲ್ಲಿದ್ದು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಭಾರತ ತಂಡ ತನ್ನ ಮುಂದಿನ ಸರಣಿಯನ್ನು ವೆಸ್ಟ್ ಇಂಡೀಸ್ (India vs West Indies) ವಿರುದ್ಧ ಆಡಲಿದೆ. ಕೆರಿಬಿಯನ್ನರ ನಾಡಿಗೆ ಟೀಮ್ ಇಂಡಿಯಾ (Team India) ಪ್ರವಾಸ ಬೆಳೆಸಲಿದ್ದು, ಜುಲೈ 12 ರಿಂದ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗಳಿಗೆ ಭಾರತ ತಂಡ ಇನ್ನಷ್ಟೆ ಪ್ರಕಟವಾಗಬೇಕಿದೆ. ಆದರೆ, ಈ ಪ್ರವಾಸದಿಂದ ಕೆಲ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ
ಟೀಮ್ ಇಂಡಿಯಾದ ಪ್ರಮುಖ ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರೋಹಿತ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸಂಪೂರ್ಣ ಟೆಸ್ಟ್ ಅಥವಾ ವೈಟ್-ಬಾಲ್ ಸರಣಿಯಿಂದ ಕೈಬಿಡುವ ಸಾಧ್ಯತೆಯಿದೆಯಂತೆ. ಅಂತೆಯೆ ಕೊಹ್ಲಿಗೆ ಕೂಡ ಇದೇ ಸೂತ್ರ ಅನ್ವಯ ಆಗುವ ಸಾಧ್ಯತೆ ಇದೆ. ಸಿರಾಜ್ ಹಾಗೂ ಶಮಿ ಸಂಪೂರ್ಣ ಪ್ರವಾಸಕ್ಕೆ ಗೈರಾಗಲಿದ್ದಾರೆ.
ವೆಸ್ಟ್ ಇಂಡೀಸ್ ಈಗ ಬಲಷ್ಠ ತಂಡದಂತೆ ಗೋಚರಿಸುತ್ತಿಲ್ಲವಾದರೂ, ಭಾರತೀಯ ಆಯ್ಕೆ ಸಮಿತಿ ಹೆಚ್ಚು ಯುವ ಆಟಗಾರರಿಗೆ ಅವಕಾಶ ನೀಡುವಂತೆ ಗೋಚರಿಸುತ್ತಿದೆ. ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಉಮ್ರಾನ್ ಮಲಿಕ್, ರಿಂಕು ಸಿಂಗ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ಅರ್ಶ್ದೀಪ್ ಸಿಂಗ್ ಸೇರಿದಂತೆ ಕೆಲ ಆಟಗಾರರು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಆಗಲಿದ್ದಾರಂತೆ. ಇದರಲ್ಲಿ ಜೈಸ್ವಾಲ್ ಹಾಗೂ ಅರ್ಶ್ದೀಪ್ ಟೆಸ್ಟ್ ತಂಡಕ್ಕೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾತಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ತಂಡವನ್ನು ಇದೇ ಜೂನ್ 27 ರಂದು ಪ್ರಕಟ ಮಾಡಲಿದೆ. ಟೀಮ್ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸವು ಎರಡು ಟೆಸ್ಟ್ಗಳೊಂದಿಗೆ ಪ್ರಾರಂಭವಾಗಲಿದೆ. ಜುಲೈ 12 ರಿಂದ 16 ರವರೆಗೆ ಮೊದಲ ಟೆಸ್ಟ್, ಜುಲೈ 20 ರಿಂದ 24 ರವರೆಗೆ ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಎರಡನೇ ಟೆಸ್ಟ್ ನಡೆಯಲಿದೆ.
ನಂತರ ಮೂರು ಏಕದಿನ ಪಂದ್ಯಗಳ ಸರಣಿಯು ನಡೆಯಲಿದೆ. ಜುಲೈ 27, 29 ಹಾಗೂ ಆಗಸ್ಟ್ 1 ರಂದು ಈ ಪಂದ್ಯವನ್ನು ಆಯೋಜಿಸಲಾಗಿದೆ. ಕೊನೆಯದಾಗಿ ಟಿ20 ಸರಣಿಯು ಆರಂಭಗೊಳ್ಳಲಿದ್ದು, ಆಗಸ್ಟ್ 3 ರಂದು ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಮೊದಲ ಪಂದ್ಯವಿದೆ. ನಂತರ ಆಗಸ್ಟ್ 6 ಮತ್ತು 8 ರಂದು ಎರಡು ಮತ್ತು ಮೂರನೇ ಟಿ20, ಆಗಸ್ಟ್ 12 ರಂದು 4ನೇ ಪಂದ್ಯ, 5 ನೇ ಹಾಗೂ ಅಂತಿಮ ಪಂದ್ಯದ ಆ. 13 ರಂದು ಆಡಲಿದೆ