Gujarat High court: ಮನುಸ್ಮೃತಿ ಉಲ್ಲೇಖಿಸಿ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್​​

Gujarat High court: ಮನುಸ್ಮೃತಿ ಉಲ್ಲೇಖಿಸಿ ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್​​

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ನೀಡಲು ನಿರಾಕರಿಸಿದ ಗುಜರಾತ್​ ಹೈಕೋರ್ಟ್​, ಜೂನ್​ 15ರೊಳಗೆ ವೈದ್ಯಕೀಯ ವರದಿ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಜೂನ್​ಗೆ ಮುಂದೂಡಿದೆ.

ಅಹಮದಾಬಾದ್: ಹೆಣ್ಣುಮಕ್ಕಳು ಈ ಹಿಂದೆ 14 ಅಥವಾ 15 ವರ್ಷ ವಯಸ್ಸಿನಲ್ಲೇ ಮದುವೆಯಾಗುತ್ತಿದ್ದರು ಮತ್ತು 17 ವರ್ಷಕ್ಕೆ ತಾಯಂದಿರಾಗುತ್ತಿದ್ದರು ಎಂದು ಗರ್ಭಪಾತಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ಮನುಸ್ಮೃತಿಯನ್ನು ಉಲ್ಲೇಖಿಸಿ ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದೆ.

ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ಏಳು ತಿಂಗಳ ಗರ್ಭವನ್ನು ತೆಗೆದುಹಾಕಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆಯನ್ನು ನಡೆಸಿದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸಮೀರ್​ ಜೆಜೆ ದವೆ ಅವರಿದ್ದ ಏಕಸದಸ್ಯ ಪೀಠ, ಈ ಹಿಂದೆ ಹುಡುಗಿಯರು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವುದು ಮತ್ತು 17 ವರ್ಷಕ್ಕಿಂತ ಮೊದಲು ಮಗುವಿಗೆ ಜನ್ಮ ನೀಡುವುದು ಸಾಮಾನ್ಯವಾಗಿತ್ತು ಎಂದು ಒತ್ತಿ ಹೇಳಿದೆ. ಭ್ರೂಣದಲ್ಲಿ ಅಥವಾ ಬಾಲಕಿಯಲ್ಲಿ ಯಾವುದೇ ಗಂಭೀರ ಕಾಯಿಲೆ ಕಂಡು ಬಂದರೆ, ನ್ಯಾಯಾಲಯವು ಅದನ್ನು ಪರಿಗಣಿಸಬಹುದು, ಹೆಣ್ಣು ಮತ್ತು ಭ್ರೂಣ ಇಬ್ಬರೂ ಆರೋಗ್ಯವಾಗಿದ್ದರೆ, ಗರ್ಭಪಾತಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬಾಲಕಿ ಪರ ವಕೀಲರು, ಬಾಲಕಿಗೆ ಆಗಸ್ಟ್​ 16 ರಂದು ಹೆರಿಗೆಯಾಗಲಿದ್ದು, ಶೀಘ್ರ ವಿಚಾರಣೆ ನಡೆಸಸುವಂತೆ ವಾದ ಮಂಡಿಸಿದರು. ಆದರೆ ನ್ಯಾಯಮೂರ್ತಿ ಸಮೀರ್ ಜೆಜೆ ದವೆ ಅವರಿದ್ದ ಏಕಸದಸ್ಯ ಪೀಠ, ರಾಜ್‌ಕೋಟ್‌ನ ಆಸ್ಪತ್ರೆಯಿಂದ ವೈದ್ಯಕೀಯ ಅಭಿಪ್ರಾಯ ಕೇಳಿದ್ದು, ವಿಚಾರಣೆಯನ್ನು ಜೂನ್‌ಗೆ ಮುಂದೂಡಿತು. ಬಾಲಕಿ 28 ವಾರಗಳ ಗರ್ಭಿಣಿಯಾಗಿದ್ದಾಳೆ.

ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ದವೆ ಅವರು 16 ವರ್ಷ 11 ತಿಂಗಳ ಬಾಲಕಿ ಜೊತೆ, ತಮ್ಮ ತಾಯಿ ಅಥವಾ ಮುತ್ತಜ್ಜಿ ಅವರು ಚಿಕ್ಕವರಾಗಿದ್ದಾಗ ಮದುವೆಯ ವಯಸ್ಸು ಎಷ್ಟಿತ್ತು ಎಂಬುದರ ಬಗ್ಗೆ ಕೇಳಲು ಹೇಳಿದರು.

“ನಾವು 21 ನೇ ಶತಮಾನದಲ್ಲಿ ವಾಸಿಸುತ್ತಿರುವ ಕಾರಣ, ನಿಮ್ಮ ತಾಯಿ ಅಥವಾ ಮುತ್ತಜ್ಜಿಯನ್ನು ಕೇಳಿ. ಅವರಿಗೆ ಗರಿಷ್ಠ 14 ರಿಂದ 15 ವಯಸ್ಸಿನ ಒಳಗೆ ಮದುವೆಯಾಗುತ್ತಿತ್ತು. ಮತ್ತು 17 ವರ್ಷಕ್ಕಿಂತ ಮೊದಲೇ ಮಗುವಿನ ತಾಯಿಯಾಗುತ್ತಿದ್ದರು. ನಾಲ್ಕು ಅಥವಾ ಐದು ತಿಂಗಳ ಅಂತರವು ಯಾವುದೇ ವ್ಯತ್ಯಾಸ ಉಂಟು ಮಾಡುವುದಿಲ್ಲ. ನೀವು ಓದಲ್ಲ, ಆದರೆ, ಇದಕ್ಕಾಗಿಯಾದರೂ ಒಂದು ಬಾರಿ ಮನುಸ್ಮೃತಿಯನ್ನು ಓದಿ” ಎಂದು ಹೇಳಿದರು. ಮನುಸ್ಮೃತಿಯು ಮನು ರಚಿಸಿರುವ ಪುರಾತನ ಹಿಂದೂ ಗ್ರಂಥವಾಗಿದ್ದು, ಇದು ಸಾಮಾಜಿಕ ನಡವಳಿಕೆಯ ಕಾನೂನುಗಳು ಮತ್ತು ನಿಯಮಗಳನ್ನು ಒಳಗೊಂಡಿದೆ.

ಅದರ ಜೊತೆಗೆ “ಭ್ರೂಣ ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಮಗು ಜೀವಂತವಾಗಿ ಜನಿಸುವ” ಸಾಧ್ಯತೆಯ ಬಗ್ಗೆ ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಹಾಗೆ ಸಂಭವಿಸಿದರೆ, ಮಗುವನ್ನು ಯಾರು ನೋಡಿಕೊಳ್ಳುತ್ತಾರೆ? ಮಗು ಜೀವಂತವಾಗಿ ಜನಿಸಿದರೆ ಮಗುವನ್ನು ಕೊಲ್ಲಲು ನ್ಯಾಯಾಲಯ ಅನುಮತಿ ನೀಡಬಹುದೇ? ಎಂದು ನ್ಯಾಯಾಧೀಶರಿಗೆ ಪ್ರಶ್ನಿಸಲಾಯಿತು. ನ್ಯಾಯಾಲಯವು ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಲು ಉದ್ದೇಶಿಸಿದೆ ಎಂದು ವಕೀಲರಿಗೆ ತಿಳಿಸಿದರು. ‘ನೀವು ಕೂಡ ದತ್ತು ಆಯ್ಕೆಗಳನ್ನು ಹುಡುಕಲು ಪ್ರಾರಂಭಿಸಿ’ ಎಂದು ಸೂಚಿಸಿದರು.

ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ (MTP) ಆಯಕ್ಟ್, 2021 ರಲ್ಲಿ ಮಾಡಿದ ತಿದ್ದುಪಡಿಯಂತೆ, ಅತ್ಯಾಚಾರಕ್ಕೊಳಗಾಗಿ ಬದುಕುಳಿದವರಿಗೆ 24 ವಾರಗಳವರೆಗೆ ಗರ್ಭಪಾತ ಮಾಡಲು ಅನುಮತಿ ನೀಡುತ್ತದೆ. ಗಣನೀಯ ಭ್ರೂಣದ ಅಸಹಜತೆಗಳ ಸಂದರ್ಭದಲ್ಲಿ ಮಾತ್ರ 24 ವಾರಗಳ ನಂತರದ ಗರ್ಭ ನಿರ್ಮೂಲನೆಗೆ ಕಾನೂನು ಮಂಜೂರು ಮಾಡುತ್ತದೆ. ಆದಾಗ್ಯೂ, ಒಂದು ಸಾಂವಿಧಾನಿಕ ನ್ಯಾಯಾಲಯವು ಸೂಕ್ತ ಸಂದರ್ಭಗಳಲ್ಲಿ 24 ವಾರಗಳ ನಂತರ ಗರ್ಭ ತೆಗೆದುಹಾಕಲು ಅವಕಾಶ ನೀಡಲು ತನ್ನ ಅಸಾಮಾನ್ಯ ಅಧಿಕಾರವನ್ನು ಬಳಸಿಕೊಳ್ಳಬಹುದು.

ಜುಲೈ 2022 ರಲ್ಲಿ, ದೆಹಲಿ ಹೈಕೋರ್ಟ್ 13 ವರ್ಷದ ಅತ್ಯಾಚಾರದಿಂದ ಬದುಕುಳಿದಿದ್ದ ಬಾಲಕಿಗೆ 26 ವಾರಗಳ ನಂತರ ವೈದ್ಯಕೀಯ ಗರ್ಭಪಾತಕ್ಕೆ ಒಳಗಾಗಲು ಅನುಮತಿ ನೀಡಿತ್ತು. ಎಳೆಯ ವಯಸ್ಸಿನಲ್ಲಿ ತಾಯ್ತನದ ಕವಚವನ್ನು ಹೊರಲು ಅವಳಿಂದ ಸಾಧ್ಯವಿಲ್ಲ, ಹಾಗೂ ಹಾಗೆ ಮಾಡಿದ್ದಲ್ಲಿ ಅದು ಒತ್ತಾಯವಾಗುತ್ತದೆ ಎಂದು ನ್ಯಾಯಾಲಯ ಹೇಳಿತ್ತು. ಆಗಸ್ಟ್ 2022 ರಲ್ಲಿ, ವೈದ್ಯಕೀಯ ಮಂಡಳಿಯ ಶಿಫಾರಸಿನ ಮೇರೆಗೆ ಅತ್ಯಾಚಾರಕ್ಕೆ ಒಳಗಾಗಿ ಬದುಕುಳಿದಿದ್ದ ಅಪ್ರಾಪ್ತೆಗೆ 28 ವಾರಗಳ ಗರ್ಭವನ್ನು ತೆಗೆದು ಹಾಕಲು ಕೇರಳ ಹೈಕೋರ್ಟ್ ಅನುಮತಿ ನೀಡಿತ್ತು.

ಪ್ರಸ್ತುತ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಯ ವಯಸ್ಸು 16 ವರ್ಷ 11 ತಿಂಗಳಾಗಿದ್ದು, ಏಳು ತಿಂಗಳ ಗರ್ಭಿಣಿಯಾಕೆ. ಗರ್ಭಾವಸ್ಥೆಯು 24 ವಾರಗಳ ಮಿತಿಯನ್ನು ದಾಟಿದೆ ಮತ್ತು ನ್ಯಾಯಾಲಯದ ಅನುಮತಿಯಿಲ್ಲದೇ ಗರ್ಭಪಾತವನ್ನು ಮಾಡಬಾರದು ಎಂದು ಆಕೆಯ ತಂದೆ ಗರ್ಭಾಪಾತ ಮಾಡಲು ಅನುಮತಿ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

Leave a Reply

Your email address will not be published. Required fields are marked *