ಪ್ರತಿ ವರ್ಷ ಗಣೇಶ ಚತುರ್ಥಿಯ ಮುನ್ನಾ ದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆಲ್ಲಾ ಸಕಲ ಸೌಭಾಗ್ಯ ನೀಡುವ ಹಬ್ಬವಾಗಿದೆ. ಈ ಗೌರಿ ಹಬ್ಬ ಭಾದ್ರಪದ ಶುದ್ಧ ತದಿಗೆ ದಿನ ಬರುತ್ತದೆ. ಗಣೇಶ ಹಬ್ಬದ ರೀತಿಯಲ್ಲಿ ವಿಜೃಂಭಣೆಯಿಂದ ಆಚರಿಸದಿದ್ದರೂ ಸರಳವಾಗಿ ಭಕ್ತಿಯಿಂದ ಆಚರಿಸಲಾಗುತ್ತದೆ.
ಈ ಗೌರಿ ಹಬ್ಬವನ್ನು ಕರ್ನಾಟಕದ ದಕ್ಷಿಣ ಭಾಗದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಸ್ವರ್ಣ ಗೌರಿ ಪೂಜೆ ಹೇಗೆ ಆಚರಣೆಯಲ್ಲಿ ಬಂತು ಎನ್ನುವ ಕುರಿತು ಸುಂದರವಾದ ಪೌರಾಣಿಕ ಕಥೆ ಚಾಲ್ತಿಯಲ್ಲಿದೆ.
ಚಂದ್ರಪ್ರಭ ಎನ್ನುವ ಅರಸನು ಭೇಟೆಯಾಡಲು ಅರಣ್ಯಕ್ಕೆ ಹೋದಾಗ ಅಲ್ಲಿ ಒಂದು ಸುಂದರವಾದ ನೈಸರ್ಗಿಕ ಸಂಪತ್ತುಳ್ಳ ಸರೋವರದ ಬಳಿ ಅನೇಕ ಅಪ್ಸರೆಯರು ಸ್ವರ್ಣಗೌರಿ ಪೂಜೆಯನ್ನು ಮಾಡುವುದರಲ್ಲಿ ನಿರತರಾಗಿರುವುದನ್ನು ಕಾಣುತ್ತಾನೆ.
ಪೂಜೆಯ ನಂತರ ಪೂಜೆಯ ಮಹತ್ವದ ಬಗ್ಗೆ ತಮಗೆ ತಿಳಿಸಬೇಕು ಎಂದು ಕೇಳುತ್ತಾನೆ. ಆ ಅಪ್ಸರೆಯರು ವ್ರತದ ಬಗ್ಗೆ ತಿಳಿಸುವರು. ಈ ವ್ರತವನ್ನು ಆಚರಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿ ಇದನ್ನು ಭಾದ್ರಪದ ಶುದ್ಧ ತದಿಗೆ ದಿನ ಆಚರಿಸಬೇಕೆಂದು ತಿಳಿಸಿ 16 ಗಂಟು ಹಾಕಿದ ದಾರವನ್ನು ಕೊಡುತ್ತಾರೆ.
ರಾಜನು ಅರಮನೆಗೆ ಬಂದ ನಂತರ ತನ್ನ ಇಬ್ಬರು ಪತ್ನಿಯರಿಗೆ ಆ ದಾರವನ್ನು ಕೊಡಲು, ಮೊದಲನೆ ಪತ್ನಿ ಆ ದಾರವನ್ನು ತಿರಸ್ಕರಿಸಿ ಒಣಗಿದ ಗಿಡದ ಮೇಲೆ ಎಸೆದಳು. ಆ ಗಿಡವು ದಾರದ ಮಹಿಮೆಯಿಂದ ತಕ್ಷಣ ಚಿಗುರಿ ಬೆಳೆಯತೊಡಗಿತು. ಅದನ್ನು ಕಂಡ ಕಿರಿಯ ಪತ್ನಿಯು ಆ ದಾರವನ್ನು ಧರಿಸಿ ರಾಜನು ಹೇಳಿದ ಕ್ರಮದಲ್ಲಿ ಸ್ವರ್ಣಗೌರಿ ವ್ರತವನ್ನು ಆಚರಿಸಿದಳು.
ನಂತರ ಅವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗಿ ಸತಿಪತಿಯರು ಶಿವಲೋಕವನ್ನು ಹೊಂದಿ ಮುಕ್ತಿಯನ್ನು ಪಡೆದರೆಂಬ ಪ್ರತೀತಿ ಪುರಾಣ ಕಥೆಗಳಲ್ಲಿ ಉಲ್ಲೇಖವಾಗಿದೆ. ಈ ಸ್ವರ್ಣಗೌರಿ ಹಬ್ಬದಲ್ಲಿ ಬಾಗಿನ ಕೊಡುವುದು ಒಂದು ವಿಶೇಷ. ಅಂದರೆ ಗೌರವಪೂರ್ಣವಾಗಿ ಕೊಡುವ ದಾನ ಅಥವಾ ಸತ್ಕಾರವೆಂದು ಕರೆಯುತ್ತಾರೆ.
ಅಕ್ಕ ತಂಗಿಯರಿಗೆ ಸಹೋದರನು ಬಾಗಿನ ಕೊಡಬೇಕಾಗುತ್ತದೆ. ಈ ಬಾಗಿನವನ್ನು ಪಡೆಯುವುದರಿಂದ ಮುತ್ತೈದೆಯರು ಸೌಭಾಗ್ಯವನ್ನು ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಗೌರಿಯನ್ನು ಕೂರಿಸಿ ಪೂಜೆ ಮಾಡುವ ಪದ್ಧತಿ ಎಲ್ಲರ ಮನೆಯಲ್ಲಿ ಇರುವುದಿಲ್ಲ. ಆದ್ದರಿಂದ ಸುಮಂಗಲಿಯರು ಗೌರಿಯನ್ನು ಪೂಜಿಸುವವರ ಮನೆಗೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.
ಮುತ್ತೈದೆಯರು ಸ್ವರ್ಣಗೌರಿ ವ್ರತವನ್ನು ನಿಷ್ಠೆಯಿಂದ ಆಚರಿಸಿದಲ್ಲಿ ಖಂಡಿತವಾಗಿ ಸಂತಾನ ಪ್ರಾಪ್ತಿ, ಅವಿವಾಹಿತರಿಗೆ ವಿವಾಹಯೋಗ ಮತ್ತು ವಿದ್ಯಾರ್ಥಿಗಳಿಗೆ ಜ್ಞಾನ ದೊರೆಯುತ್ತದೆ ಎನ್ನುವುದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ.
ಈಗಿನ ಆಧುನಿಕ ಯುಗದಲ್ಲಿ ಗೌರಿ ಮತ್ತು ಗಣೇಶನ ಮೂರ್ತಿಗಳನ್ನು ವಿವಿಧ ರೂಪದಲ್ಲಿ ತಯಾರಿಸಿದರೂ ಬಣ್ಣ ರಹಿತವಾದ ಮೂರ್ತಿಗಳು ಪೂಜೆಗೆ ಶ್ರೇಷ್ಠ ಎನ್ನುವುದು ನಂಬಿಕೆ. ಸ್ವರ್ಣಗೌರಿ ಹಬ್ಬದ ದಿನ ಈ ಕೆಳಗಿನ ಶ್ಲೋಕವನ್ನು 108 ಬಾರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದಲ್ಲಿ, ಪರಿಪೂರ್ಣ ಪ್ರತಿ ಫಲ ಸಿಗುತ್ತದೆ.