ಏರ್ ಇಂಡಿಯಾ ವಿಮಾನದಲ್ಲಿ ನವೆಂಬರ್ 19ರಂದು ಪ್ರಯಾಣಿಸಬೇಡಿ. ಒಂದು ವೇಳೆ ಪ್ರಯಾಣಿಸಿದರೆ ನಿಮ್ಮ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ಖಾಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಎಚ್ಚರಿಕೆ ನೀಡಿದ್ದಾರೆ.
ಗುರುಪತ್ವಂತ್ ಸಿಂಗ್ ಪನ್ನು ನಿಷೇಧಿತ ಅಮೆರಿಕ ಮೂಲದ ಸಿಖ್ ಫಾರ್ ಜಸ್ಟಿಸ್ ಸಂಘಟನೆಯ ಮುಖ್ಯಸ್ಥರಾಗಿದ್ದಾರೆ. ಇತ್ತೀಚೆಗಷ್ಟೇ ಇಸ್ರೇಲ್ ಮೇಲೆ ಗಾಜಾ ನಡೆಸಿದ ದಾಳಿ ಮಾದರಿಯಲ್ಲಿ ಭಾರತದ ಮೇಲೂ ದಾಳಿ ಆಗಲಿದೆ ಎಂದು ಎಚ್ಚರಿಸಿದ್ದರು.
ಗುರುಪತ್ವಂತ್ ಸಿಂಗ್ ಪನ್ನು ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ನೀಡಿರುವ ವೀಡಿಯೋ ಇದೀಗ ವೈರಲ್ ಆಗಿದೆ.
ನ.19ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ. ಅಂದು ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ಸ್ತಬ್ಧಗೊಳ್ಳಲಿದೆ. ಈ ವಿಮಾನ ನಿಲ್ದಾಣದ ಹೆಸರು ಬದಲಾಗಲಿದೆ ಎಂದು ಅವರು ವೀಡಿಯೊದಲ್ಲಿ ಎಚ್ಚರಿಸಿದ್ದಾರೆ.
ವೀಡಿಯೋದಲ್ಲಿ ನವೆಂಬರ್ 19ರಂದು ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆಯುವ ದಿನ ಎಂದು ಅವರು ಪ್ರಸ್ತಾಪಿಸಿದ್ದಾರೆ.