ಭಾರತ ತಂಡ ಟೂರ್ನಿಯಲ್ಲಿ ಸತತ 6 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಅಜೇಯವಾಗಿದ್ದರೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ನಲ್ಲಿ ಸ್ಥಾನ ಖಚಿತವಾಗಿಲ್ಲ!
ಹೌದು, ಭಾರತ ತಂಡ ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ಆಡಿದ ಎಲ್ಲಾ 6 ಪಂದ್ಯಗಳಲ್ಲಿ ಗೆದ್ದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿಲ್ಲ. ಆದರೆ ಇನ್ನೊಂದು ಪಂದ್ಯ ಗೆದ್ದರೂ ಸೆಮಿಫೈನಲ್ ಪ್ರವೇಶಿಸಲಿದೆ.
ವಿಶ್ವಕಪ್ ಲೀಗ್ ನಲ್ಲಿ ಎಲ್ಲಾ ತಂಡಗಳಿಗೂ ಇನ್ನೂ 3 ಪಂದ್ಯಗಳನ್ನು ಆಡುವ ಅವಕಾಶವಿದೆ. 9 ತಂಡಗಳು ಸೋಲು-ಗೆಲುವು ಕಂಡು ಸ್ಥಾನಗಳಲ್ಲಿ ಕುಸಿದಿದ್ದರೂ ಸೆಮಿಫೈನಲ್ ಅವಕಾಶದ ಬಾಗಿಲು ತೆರೆದಿದೆ. ಟೂರ್ನಿಯಿಂದ ಹೊರಬಿದ್ದ ಏಕೈಕ ತಂಡ ಅಂದರೆ ಅದು ಬಾಂಗ್ಲಾದೇಶ ಮಾತ್ರ!
ಅತಿಥೇಯ ಭಾರತ ತಂಡ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಇನ್ನೊಂದು ಪಂದ್ಯ ಗೆದ್ದರೂ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲಿದೆ. ದಕ್ಷಿಣ ಆಫ್ರಿಕಾ, 6 ಪಂದ್ಯಗಳ ಪೈಕಿ 5ರಲ್ಲಿ 2ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು 4ರಲ್ಲಿ ಗೆದ್ದು 2ರಲ್ಕಿ ಸೋತು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಹೀಗಾಗಿ ಈ ಮೂರು ತಂಡಗಳಿಗೆ ಅವಕಾಶ ಹೆಚ್ಚಾಗಿದೆ.
ಪಾಕಿಸ್ತಾನ ತಂಡ 3ರಲ್ಲಿ ಗೆದ್ದು 4ರಲ್ಲಿ ಸೋತು 5ನೇ ಸ್ಥಾನಕ್ಕೆ ಕುಸಿದಿದೆ. ಆಫ್ಘಾನಿಸ್ಥಾನ ತಲಾ 3 ಜಯ ಹಾಗೂ 3 ಸೋಲಿನೊಂದಿಗೆ ನಂತರದ ಸ್ಥಾನ ಗಳಿಸಿದೆ. ಶ್ರೀಲಂಕಾ ಮತ್ತು ನೆದರ್ಲೆಂಡ್ ತಂಡಗಳು 2 ಜಯ ಹಾಗೂ 4 ಸೋಲಿನೊಂದಿಗೆ 7 ಮತ್ತು 8ನೇ ಸ್ಥಾನದಲ್ಲಿವೆ.
ಇಂಗ್ಲೆಂಡ್ 6 ಪಂದ್ಯಗಳಲ್ಲಿ ಕೇವಲ 1 ಜಯ ಹಾಗೂ 5ರಲ್ಲಿ ಸೋಲನುಭವಿಸಿ ಕೊನೆಯ ಸ್ಥಾನದಲ್ಲಿದ್ದರೂ ಸೆಮಿಫೈನಲ್ ಅವಕಾಶ ಹೊಂದಿದೆ. ಆದರೆ ಇಂಗ್ಲೆಂಡ್ ಗಿಂತ ಮೇಲಿನ ಸ್ಥಾನದಲ್ಲಿದ್ದರೂ 7ರಲ್ಲಿ 1 ಜಯ ಹಾಗೂ 6ರಲ್ಲಿ ಸೋತಿರುವ ಬಾಂಗ್ಲಾದೇಶ ಅಧಿಕೃತವಾಗಿ ಸೆಮಿಫೈನಲ್ ರೇಸ್ ನಿಂದ ಹೊರಬಿದ್ದಿದೆ.