ರಾಜ್ಯವನ್ನು ಕಾಡುತ್ತಿರುವ ಬರದಿಂದ 33,700 ಕೋಟಿ ರೂ. ನಷ್ಟ ಉಂಟಾಗಿದ್ದು, 17,900 ಕೋಟಿ ರೂ.ನಷ್ಟು ಪರಿಹಾರ ಕೇಳಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ತಂಡ ಬರ ಅಧ್ಯಯನ ಮಾಡಿಕೊಂಡು ಹೋಗಿದೆ. ಇನ್ನೂ ವರದಿ ಕೊಟ್ಟಿಲ್ಲ. ವರದಿ ಬಂದ ನಂತರ ಕೇಂದ್ರ ಎಷ್ಟು ಕೊಡುತ್ತದೆ ನೋಡಬೇಕು ಎಂದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬರ ಅಧ್ಯಯನ ಮಾಡುತ್ತಿರುವುದು ರಾಜಕೀಯ ಉದ್ದೇಶಕ್ಕಾಗಿ. ಕೇಂದ್ರ ಸರ್ಕಾರದ್ದೇ ಬರ ಅಧ್ಯಯನ ತಂಡ ಅಧ್ಯಯನ ಮಾಡಿರಬೇಕಾದರೆ ಇವರೇನು ಅಧ್ಯಯನ ಮಾಡೋದು? ಮೊದಲು ಕೇಂದ್ರ ಸರ್ಕಾರದ ಬಳಿ ಕೂತು ದುಡ್ಡು ಕೊಡಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ಬಿಜೆಪಿಯವರು ಬರ ಅಧ್ಯಯನ ಮಾಡಲಿ. ನಮ್ಮದೇನು ತಕರಾರು ಇಲ್ಲ, ಮಾಡಬಾರದು ಅಂತನೂ ನಾವು ಹೇಳೋಕೆ ಹೋಗಲ್ಲ. ನಾವು ವರದಿ ಕಳುಹಿಸಿ ತುಂಬಾ ದಿನ ಆಯ್ತು, ಕೇಂದ್ರ ತಂಡ ಹೋಗಿ ತುಂಬಾ ದಿನ ಆಯ್ತು ಇನ್ನೂ ವರದಿ ಕೊಟ್ಟಿಲ್ಲ ಎಂದು ಅವರು ಹೇಳಿದರು.
ಬಿಜೆಪಿಯವರಿಗೆ ಹಳ್ಳಿಗಾಡಿನ ಜನರ ಮೇಲೆ ಪ್ರೀತಿ ಇದ್ದರೆ ರೈತರ ಮೇಲೆ ಗೌರವ ಇದ್ದರೆ ಕರ್ನಾಟಕದ ಮೇಲೆ ಕಾಳಜಿ ಇದ್ದರೆ ಮೊದಲು ಪರಿಹಾರ ಕೊಡಲಿಸಲಿ. 25 ಜನ ಎಂಪಿಗಳಿದ್ದಾರಲ್ಲ ಕೂತು ಮಾತನಾಡಿ ಕೊಡಿಸಲಿ ಎಂದು ಅವರು ಸವಾಲು ಹಾಕಿದರು.