ಪ್ರೇಮಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ವಿವಾಹಿತ ಮಹಿಳೆಯೊಬ್ಬಳು ಪ್ರೇಮಿಯೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದೊಡ್ಡಗುಬ್ಬಿ ನಿವಾಸದ ಅಪಾರ್ಟ್ ಮೆಂಟ್‌ನಲ್ಲಿ ಸೌಮಿನಿ ದಾಸ್ (20), ಅಬಿಲ್ ಅಬ್ರಾಹಂ (29) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಫ್ಲ್ಯಾಟ್‌ನಲ್ಲಿ ಬೆಂಕಿ ಕಂಡು ಅಪಾರ್ಟ್ಮೆಂಟ್ ನಿವಾಸಿಗಳು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬೆಂಕಿಯಲ್ಲಿ ಬೆಂದು ಸೌಮಿನಿ ಕೊನೆಯುಸಿರೆಳೆದಿದ್ದಾಳೆ. ಭಾಗಶಃ ಸುಟ್ಟು ಹೋಗಿದ್ದ ಅಬ್ರಾಹಂನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಬ್ರಾಹಂ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಪಶ್ಚಿಮ ಬಂಗಾಳ ಮೂಲದ ಸೌಮಿನಿ ದಾಸ್ ಕರಿಯಮ್ಮ ಆಗ್ರಹಾರ ಸಮೀಪದ ಖಾಸಗಿ ಕಾಲೇಜಿನಲ್ಲಿ 2ನೇ ವರ್ಷದ ನರ್ಸಿಂಗ್ (Nursing) ಓದುತ್ತಿದ್ದರು.

ನರ್ಸ್ ಸರ್ವೀಸ್ ಏಜೆನ್ಸಿ ನಡೆಸುತ್ತಿದ್ದ ಕೇರಳ ಮೂಲದ ಅಬ್ರಾಹಂಗೆ ಕೆಲ ತಿಂಗಳ ಹಿಂದೆ ಸೌಮಿನಿ ಪರಿಚಯವಾಗಿದ್ದು, ರಜೆ ಇದ್ದಾಗ ಸೌಮಿನಿ ಅಬ್ರಾಹಂ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು.

3 ತಿಂಗಳ ಹಿಂದೆ ಅಬ್ರಾಹಂನನ್ನು ತನ್ನ ಪತಿಗೆ ಪರಿಚಯಿಸಿದ್ದು, ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.

ಕೆಲ ದಿನಗಳ ಹಿಂದೆ ಕೋಲ್ಕತಾಗೆ ತೆರಳಿದ್ದ ಸೌಮಿನಿ ಮರಳಿದ ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಫ್ಲ್ಯಾಟ್ ಬಾಡಿಗೆಗೆ ಪಡೆದಿದ್ದಳು.

ಸೌಮಿನಿ ಪ್ರೇಮದ ವಿಚಾರವನ್ನು ಪತಿಗೆ ತಿಳಿಸಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಸೌಮಿನಿ ಹಾಗೂ ಅಬ್ರಾಹಂ ಇಬ್ಬರೂ ಸಾಯಲು ತೀರ್ಮಾನ ಮಾಡಿದ್ದಾರೆ.

ಭಾನುವಾರ ಮಧ್ಯಾಹ್ನ ವೇಳೆಗೆ ಬಾಡಿಗೆ ಪಡೆದಿದ್ದ ಅಪಾರ್ಟ್ಮೆಂಟ್‌ನಲ್ಲಿ ಪೆಟ್ರೋಲ್ (Petrol) ಸುರಿದುಕೊಂಡು ಇಬ್ಬರೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *