ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್​ದಾರರಿಗೆ ಮಾಸಿಕ ತಲಾ 170 ರೂ. ನೀಡುತ್ತೇವೆ. ಜುಲೈ ತಿಂಗಳಿಂದಲೇ ಪಡಿತರದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಮುನಿಯಪ್ಪ ತಿಳಿಸಿದರು.

ಬೆಂಗಳೂರು: ಕಾಂಗ್ರೆಸ್ ಚುನಾವಣಾಪೂರ್ವ ಗ್ಯಾರಂಟಿಗಳಲ್ಲಿ ಒಂದಾದ ಉಚಿತ ಅಕ್ಕಿ ವಿತರಣೆಗೆ ತೊಡಕಾಗಿರುವುದರಿಂದ ಐದು ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ಕರ್ನಾಟಕ ಸಚಿವ ಸಂಪುಟ (Karnataka Cabinet) ಮಹತ್ವದ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಕುರಿತು ಆಹಾರ ಸಚಿವ ಮುನಿಯಪ್ಪ ಮಾಹಿತಿ ನೀಡಿದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರಾದ ಎಚ್​​ಕೆ ಪಾಟೀಲ್ ಹಾಗೂ ಕೆಎಚ್ ಮುನಿಯಪ್ಪ ಸಂಪುಟ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದರು. ಇದರೊಂದಿಗೆ, ಯಡಿ ಬಿಪಿಎಲ್​ ಕಾರ್ಡ್​​ದಾರರಿಗೆ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5ಕೆಜಿ ಅಕ್ಕಿಯ ಬದಲು ಹಣ ದೊರೆಯಲಿದೆ.

ಅಕ್ಕಿ ಬದಲು ಜನರಿಗೆ ಹಣ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ. 5 ಕೆಜಿ ಅಕ್ಕಿ ಬದಲು ಜನರಿಗೆ ಹಣ ನೀಡಲು ನಿರ್ಧರಿಸಲಾಗಿದೆ. ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಬಿಪಿಎಲ್ ಪಡಿತರ ಕಾರ್ಡ್​ದಾರರಿಗೆ ಮಾಸಿಕ ತಲಾ 170 ರೂ. ನೀಡುತ್ತೇವೆ. ಜುಲೈ ತಿಂಗಳಿಂದಲೇ ಪಡಿತರದಾರರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ಮುನಿಯಪ್ಪ ತಿಳಿಸಿದರು.

ಅಕ್ಕಿ ಸಿಗವ ವರೆಗೆ ಮಾತ್ರ ಹಣ

ಅಕ್ಕಿ ಸಿಗುವವರೆಗೆ  ಮಾತ್ರ ಪರ್ಯಾಯ ವ್ಯವಸ್ಥೆಯಾಗಿ ಹಣ ನೀಡುತ್ತಿದ್ದೇವೆ. ಅಕ್ಕಿ ಸಿಕ್ಕ ನಂತರ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಮುನಿಯಪ್ಪ ತಿಳಿಸಿದ್ದಾರೆ. ಈ ಮಧ್ಯೆ, ಒಟ್ಟು 15 ವಿಷಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ನಿರ್ಣಯ ಕೈಗೊಂಡಿದ್ದೇವೆ. ಈ ಪೈಕಿ ನಾಲ್ಕು ವಿಷಯಗಳು ಲೋಕಾಯುಕ್ತಕ್ಕೆ ಸಂಬಂಧಪಟ್ಟಿದ್ದು. ಕರ್ನಾಟಕ ಲೋಕಾಯುಕ್ತದ ಉಪನಿರ್ದೇಶಕರು, ಲೆಕ್ಕಪತ್ರ ಅಪರ ನಿಬಂಧಕರು ಗುತ್ತಿಗೆ ಮೇಲೆ ನೇಮಕ ಆಗಿದ್ದರು. ಇವರ ಸೇವೆಯನ್ನು ಒಂದು ವರ್ಷ ಗುತ್ತಿಗೆ ಆಧಾರದ ಮೇಲೆ ಮುಂದುವರಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಹೆಚ್​ಕೆ ಪಾಟೀಕ್ ತಿಳಿಸಿದರು.

ಉಚಿತ ಅಕ್ಕಿ ನೀಡುವ ಯೋಜನೆ ಜಾರಿಗಾಗಿ ಅಕ್ಕಿ ಖರೀದಿಸಲು ಕರ್ನಾಟಕ ಸರ್ಕಾರ ಕೇಂದ್ರ ಆಹಾರ ನಿಗಮದ ಮೊರೆ ಹೋಗಿತ್ತು. ಆದರೆ, ಅಲ್ಲಿಂದ ಹೆಚ್ಚುವರಿ ಅಕ್ಕಿ ಪೂರೈಕೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ನಂತರ ಸಚಿವ ಮುನಿಯಪ್ಪ ಅವರು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೂ ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಡುವಣ ಜಟಾಪಟಿಗೂ ಕಾರಣವಾಗಿತ್ತು. ರಾಜ್ಯದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಣ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು.

ಬಡವರ ಕಾರ್ಯಕ್ರಮಕ್ಕೆ ಕಲ್ಲುಹಾಕುವ ಕೆಲಸ ಮಾಡಿದ್ದಾರೆ; ಸಿದ್ದರಾಮಯ್ಯ

ಬಿಜೆಪಿಯವರು, ಕೇಂದ್ರ ಸರ್ಕಾರದವರು ಬಡವರ ಕಾರ್ಯಕ್ರಮಕ್ಕೆ ಕಲ್ಲುಹಾಕುವ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಕೊಡುತ್ತೇವೆ ಎಂದರೂ ಕೇಂದ್ರ ಅಕ್ಕಿ ಪೂರೈಸಲು ಕೇಂದ್ರದವರು ಸಿದ್ಧರಿಲ್ಲ. ಬಡವರ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಆಹಾರ ಸಚಿವ ಮುನಿಯಪ್ಪ ಗೋಯಲ್​ರನ್ನು ಭೇಟಿ ಮಾಡಿದ್ದರು. ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅಕ್ಕಿ ಇಲ್ಲ ಎಂದಿದ್ದಾರೆ. ನಾನೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಮನವಿ ಮಾಡಿದ್ದೆ. ಆಹಾರ ಸಚಿವ ಪಿಯೂಷ್ ಗೋಯಲ್​ಗೆ ಹೇಳುತ್ತೇನೆ ಎಂದಿದ್ದರು. ನಂತರ ಗೋಯಲ್ ಅವರನ್ನು ಮುನಿಯಪ್ಪ ಭೇಟಿಯಾಗಿ ಮನವಿ ಮಾಡಿದ್ದರು. ರಾಜ್ಯಕ್ಕೆ ಅಕ್ಕಿ ಪೂರೈಸಲು ಆಗುವುದಿಲ್ಲ ಎಂದು ಗೋಯಲ್​ ಹೇಳಿದ್ದರು. ಜುಲೈ 1ರಿಂದ 10 ಕೆಜಿ ಆಹಾರಧಾನ್ಯ ನೀಡುವುದಾಗಿ ಭರವಸೆ ನೀಡಿದ್ದೆವು. ಜನರಿಗೆ ನಾವು ನೀಡಿದ ಭರವಸೆಯಂತೆ ಹಣ ನೀಡಲು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಂಪುಟ ಸಭೆಯ ಇನ್ನಷ್ಟು ನಿರ್ಧಾರಗಳು

  • ವಿವಿಧ ನೀರಾವರಿ ನ್ಯಾಯಾಧಿಕರಣ ಕಾನೂನು ವಿಷಯಗಳ ಅನುಷ್ಠಾನ
  • ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಪುಟ ಉಪಸಮಿತಿ ರಚನೆ
  • ಆನೇಕಲ್, ಚಂದಾಪುರ ಒಳಚರಂಡಿ ಕಾಮಗಾರಿಗೆ 106 ಕೋಟಿ ರೂ.
  • ಕನ್ನಡಪರ ಸಂಘಟನೆ, ರೈತರ ಮೇಲಿನ ಕೇಸ್​ ವಾಪಸ್​ಗೆ ನಿರ್ಧಾರ
  • ಕೇಸ್​ ಹಿಂಪಡೆಯಲು ಸಂಪುಟ ಉಪಸಮಿತಿ ರಚನೆ ಮಾಡಲು ಅಸ್ತು
  • ಬೃಹತ್ ಬಂಡವಾಳ ಹೂಡಿಕೆಗೆ ಅಧಿಕಾರಯುತ ಮಂಜೂರು ಸಮಿತಿ ರಚನೆಗೆ ಅನುಮೋದನೆ

Leave a Reply

Your email address will not be published. Required fields are marked *