Ranbir Kapoor: ಆಲಿಯಾ ಭಟ್ ಸಿಂಗಲ್ ಆಗಿ ಪೋಸ್ ನೀಡಲಿ ಎಂದು ಫೋಟೋಗ್ರಾಫರ್ಗಳು ಮನವಿ ಮಾಡಿಕೊಂಡರು. ಈ ಮನವಿಗೆ ರಣಬೀರ್ ಕಪೂರ್ ಸ್ಪಂದಿಸಿದರು. ಆದರೆ ಆಲಿಯಾ?
ಬಾಲಿವುಡ್ನ ಸ್ಟಾರ್ ದಂಪತಿಗಳಾದ ರಣಬಿರ್ ಕಪೂರ್ (Ranbir Kapoor) ಮತ್ತು ಅವರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ತುಂಬ ಬ್ಯುಸಿ ಆಗಿದ್ದಾರೆ. ಶೂಟಿಂಗ್, ಪ್ರಮೋಷನ್ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಈಗ ಕೊಂಚ ಬಿಡುವು ಮಾಡಿಕೊಂಡು ಅವರು ವಿದೇಶಕ್ಕೆ ಹಾರಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದ ಅವರ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಆಗ ಪಾಪರಾಜಿಗಳು (Paparazzi) ಒಂದು ಮನವಿ ಮಾಡಿದ್ದಾರೆ. ‘ರಣಬೀರ್ ಕಪೂರ್ ಬೇಡ.. ನೀವು ಮಾತ್ರ ಪೋಸ್ ನೀಡಿ’ ಎಂದು ಆಲಿಯಾಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಆಲಿಯಾ ಭಟ್ (Alia Bhatt) ಅವರು ಈ ಮನವಿಯನ್ನು ಒಪ್ಪಿಕೊಂಡಿಲ್ಲ. ಗಂಡನ ಜೊತೆಯಾಗಿಯೇ ಅವರು ಪೋಸ್ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಜೊತೆಯಾಗಿ ಕಾಣಿಸಿಕೊಂಡಾಗ ಮೊದಲಿಗೆ ಇಬ್ಬರ ಫೋಟೋವನ್ನು ಜೊತೆಯಾಗಿ ಕ್ಲಿಕ್ಕಿಸಲಾಯಿತು. ಆದರೆ ಆಲಿಯಾ ಭಟ್ ಅವರ ಸಿಂಗಲ್ ಫೋಟೋ ಕೂಡ ಬೇಕು ಎಂದು ಪಾಪರಾಜಿಗಳಿಗೆ ಅನಿಸಿತು. ಹಾಗಾಗಿ ಅವರೊಬ್ಬರೇ ಪೋಸ್ ನೀಡಲಿ ಎಂದು ಫೋಟೋಗ್ರಾಫರ್ಗಳು ಮನವಿ ಮಾಡಿಕೊಂಡರು. ಈ ಮನವಿಗೆ ರಣಬೀರ್ ಕಪೂರ್ ಸ್ಪಂದಿಸಿದರು. ಅವರು ಕೊಂಚ ಪಕ್ಕಕ್ಕೆ ಸರಿದುಕೊಂಡರು. ಆದರೆ ಇದು ಆಲಿಯಾಗೆ ಸರಿ ಎನಿಸಲಿಲ್ಲ. ಕೂಡಲೇ ಅವರು ರಣಬೀರ್ ಕಪೂರ್ ಹತ್ತಿರಕ್ಕೆ ಬಂದು ಪುನಃ ಪೋಸ್ ನೀಡಿ ಮುಂದೆ ಸಾಗಿದರು.
ಆಲಿಯಾ ಭಟ್ ಅವರಿಗೆ ರಣಬೀರ್ ಕಪೂರ್ ಮೇಲೆ ಸಾಕಷ್ಟು ವರ್ಷಗಳಿಂದಲೂ ಕ್ರಶ್ ಇತ್ತು. ಆದರೆ ಅದನ್ನು ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇತ್ತ ರಣಬೀರ್ ಕಪೂರ್ ಅವರು ಹಲವು ನಟಿಯರ ಜೊತೆ ಪ್ರೇಮ ಸಲ್ಲಾಪ ನಡೆಸಿದ್ದರು. ಆದರೆ ಅಂತಿಮವಾಗಿ ಅವರು ಕೈ ಹಿಡಿದಿದ್ದು ಆಲಿಯಾ ಅವರನ್ನು. ಕಳೆದ ವರ್ಷ ಏಪ್ರಿಲ್ 14ರಂದು ಈ ಜೋಡಿ ಹಸೆ ಮನೆ ಏರಿತು. ಈ ದಂಪತಿಗೆ ಕೆಲವೇ ತಿಂಗಳ ಹಿಂದೆ ಹೆಣ್ಣು ಮಗು ಜನಿಸಿದ್ದು, ರಹಾ ಎಂದು ಹೆಸರು ಇಡಲಾಗಿದೆ.
ವಿದೇಶಿ ಪ್ರವಾಸಕ್ಕೆ ಹೋಗಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಮಗಳನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಮಗಳ ಫೋಟೋವನ್ನು ಕ್ಲಿಕ್ಕಿಸಲು ಅವರು ಅನುಮತಿ ನೀಡಿಲ್ಲ. ಪಾಪರಾಜಿಗಳಿಂದ ಮತ್ತು ಮಾಧ್ಯಮದ ಕಣ್ಣಿಂದ ಮಗಳನ್ನು ಅವರು ದೂರ ಇಟ್ಟಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಆಲಿಯಾ ಭಟ್ ನಟನೆಯ ‘ಹಾರ್ಟ್ ಆಫ್ ಸ್ಟೋನ್’ ಸಿನಿಮಾ ಆಗಸ್ಟ್ 11ರಂದು ಒಟಿಟಿಯಲ್ಲಿ ಬಿಡುಗಡೆಗೆ ಆಗಲಿದೆ. ಅದೇ ದಿನ ರಣಬೀರ್ ಕಪೂರ್ ಅವರ ‘ಅನಿಮಲ್’ ಸಿನಿಮಾವು ಚಿತ್ರಮಂದಿರದಲ್ಲಿ ತೆರೆಕಾಣಲಿದೆ.