Accident – ಕಂದನ ಬರುವಿಕೆಗೆ ಸಾಕಷ್ಟು ಕನಸು ಕಟ್ಟಿದ್ದು ಅಪ್ಪ-ಅಮ್ಮಾ ಎಂದು ಕರೆಸಿಕೊಳ್ಳುವ ಹಂಬಲದ ಸಮಯವಾಗಿತ್ತು ಆದ್ರೆ ಅದು ನಿಜಕ್ಕೂ ಕರುಣಾಜನಕವಾಗಿ ಕನಸಾಗೆ ಉಳಿಯಿತು ಹೌದು, ಲಾರಿಯೊಂದು ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಗಂಡನ ಎದುರಲ್ಲೇ 8 ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಎಡೆಹಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಈ ಅಪಘಾತದಲ್ಲಿ ಎಂಟು ತಿಂಗಳ ಗರ್ಭಿಣಿ ಮಹಿಳೆ ಹಾಗೂ ಗರ್ಭದಲ್ಲಿದ್ದ ನವಜಾತ ಶಿಶು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಗರ್ಭಿಣಿ ಮಹಿಳೆಯ ಹೊಟ್ಟೆಯಿಂದ ಮಗು ಹೊರಬಂದು ವಿಲವಿಲ ಒಡ್ಡಾಡುತ್ತಾ ಮೃತಪಟ್ಟಿದ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಸಿಂಚನ (30) ಎಂದು ಗುರುತಿಸಲಾಗಿದೆ. 8 ತಿಂಗಳ ಗರ್ಭಿಣಿಯಾಗಿದ್ದ ಸಿಂಚನ ಹೆರಿಗೆ ಸುಸೂತ್ರವಾಗಿ ಆಗಲಿ ಎಂಬ ಉದ್ದೇಶದಿಂದ ತಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಿ ವಾಪಸ್ ಮನೆಗೆ ಬರುತ್ತಿರುವಾಗ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಈ ದಂಪತಿ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಹಿಂಬದಿಯಲ್ಲಿದ್ದ 8 ತಿಂಗಳ ಗರ್ಭಿಣಿ ಸಿಂಚನ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ. ಟಿಪ್ಪರ್ ಸಿಂಚನಾ ಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ತಾಯಿಯ ಹೊಟ್ಟೆಯಿಂದ ಹೊರಗೆ ಬಂದಿದೆ. ತಂದೆಯ ಕಣ್ಣೆದುರಲ್ಲೇ ನಡು ರಸ್ತೆಯಲ್ಲಿ ಮಗು ವಿಲ ವಿಲ ಒದ್ದಾಡಿ ಮೃತಪಟ್ಟಿದೆ. ದೇವರ ಕೃಪೆಯಿಂದ ಸಿಂಚನಾ ಪತಿ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದು, ಆದರೆ ತನ್ನ ಕಣ್ಣ ಮುಂದೆಯೇ ಪ್ರೀತಿಯ ಪತ್ನಿ ಹಾಗೂ ಇನ್ನೂ ಕಣ್ಣು ಬಿಟ್ಟು ಲೋಕವನ್ನೇ ಕಾಣದ ಮಗು ಮೃತಪಟ್ಟಿರುವುದು ನೋಡಿ ರಸ್ತೆಯಲ್ಲೇ ಗೋಳಾಡಿದ್ದಾರೆ.
ಇನ್ನೂ ಮೃತ ಸಿಂಚನಾಗೆ ಈ ತಿಂಗಳಲ್ಲಿ 9 ತಿಂಗಳು ತುಂಬುತ್ತಿತ್ತು. ಈ ಕಾರಣದಿಂದಲೇ ಹೆರಿಗೆ ಸುಲಭವಾಗಿ ಆಗಲಿ ಎಂದು ದಂಪತಿಯರಿಬ್ಬರು ದಾಬಸ್ ಪೇಟೆಯ ಶಿವಗಂಗೆಯ ಗಣಪತಿ ದೇವಾಲಯಕ್ಕೆ ತೆರಳಿ ಅಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ತಮ್ಮ ಸ್ವಂತ ಊರಿಗೆ ವಾಪಾಸ್ಸಾಗುತ್ತಿದ್ದಾಗ ಈ ಘಟನೆ ನಡೆದು ಹೋಗಿದೆ. ಕೆಲವೊಂದು ಮೂಲಗಳ ಪ್ರಕಾರ ಲಾರಿ ಚಾಲಕನ ಅತಿಯಾದ ವೇಗವೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಇನ್ನೂ ತುಂಬು ಗರ್ಭಿಣಿ ಹಾಗೂ ಕಣ್ಣೇ ಬಿಡದ ನವಜಾತ ಶಿಶುವನ್ನು ಕಳೆದುಕೊಂಡ ಗಂಡ ಹಾಗೂ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ