5,000 ಮಹಿಳೆಯರಿಂದ ಅಂಗಾಂಗ ದಾನಕ್ಕೆ ನಿರ್ಧಾರ: ಸ್ವಾತಂತ್ರ್ಯೋತ್ಸವದಂದು ಒಪ್ಪಿಗೆ ಪತ್ರ ಸಲ್ಲಿಕೆ
ಕುಟುಂಬಶ್ರೀಯ 25ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕ್ಯಾಲಿಕಟ್ ಜಿಲ್ಲೆಯ ಕೊಟ್ಟೂರು ಪಂಚಾಯತಿನ 5000 ಕುಟುಂಬಶ್ರೀ ಸದಸ್ಯರು ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಕ್ಯಾಲಿಕಟ್(ಕೇರಳ): ಇಲ್ಲಿನ ಗ್ರಾಮ ಪಂಚಾಯತ್ವೊಂದರ ಸುಮಾರು 5000 ಕುಟುಂಬಶ್ರೀ ಸದಸ್ಯರು ಮರಣಾ ನಂತರದ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಮುಂಬರುವ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ಅಂಗಾಂಗ ದಾನದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿ ಅಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ಕುಟುಂಬಶ್ರೀಯ 25ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕೊಟ್ಟೂರು ಗ್ರಾಮ ಪಂಚಾಯತಿಯ ಕುಟುಂಬಶ್ರೀ ಸಮುದಾಯ ಅಭಿವೃದ್ಧಿ ಸೊಸೈಟಿ (ಸಿಡಿಎಸ್) ಇಂತಹ ಕ್ರಾಂತಿಕಾರಿ ಹೆಜ್ಜೆಯೊಂದನ್ನು ಇಟ್ಟಿದೆ.
ಕುಟುಂಬಶ್ರೀ ಎಂಬುದು ಕೇರಳ ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಬಡತನ ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣದ ಕಾರ್ಯಕ್ರಮ. ಇದು ನೆರೆಹೊರೆಯ ಮಹಿಳೆಯರ ಸಮುದಾಯ ಗುಂಪುಗಳಾಗಿವೆ. ಪ್ರತಿ ಕುಟುಂಬಶ್ರೀ ಘಟಕವು ತಲಾ 20 ಮಹಿಳಾ ಸದಸ್ಯರನ್ನು ಒಳಗೊಂಡಿರುತ್ತದೆ. ಕೇರಳದಾದ್ಯಂತ ಲಕ್ಷಕ್ಕೂ ಅಧಿಕ ಕುಟುಂಬಶ್ರೀ ಘಟಕಗಳು ಕಾರ್ಯಾಚರಿಸುತ್ತವೆ.
ಅಂಗಾಂಗ ದಾನದ ಕುರಿತು ಜಾಗೃತಿ ಕಾರ್ಯಕ್ರಮ : ಕುಟುಂಬಶ್ರೀ ಘಟಕಗಳು ರಾಜ್ಯಾದ್ಯಂತ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತವೆ. ಅಂಗಾಂಗ ದಾನದ ಕುರಿತಾಗಿ ಕೊಟ್ಟೂರು ಸಿಡಿಎಸ್ (ಕುಟುಂಬಶ್ರೀ ಸಮುದಾಯ ಅಭಿವೃದ್ಧಿ ಸೊಸೈಟಿ) ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಿಡಿಎಸ್ ಸದಸ್ಯರು ಮತ್ತು ಸಂಚಾಲಕರನ್ನು ಒಳಗೊಂಡ ಮೊದಲ ಹಂತದ ಜಾಗೃತಿ ಕಾರ್ಯಕ್ರಮವು ಅವಿತನಲ್ಲೂರು ಎಲ್.ಪಿ ಶಾಲೆಯಲ್ಲಿ ನಡೆಯಿತು. ಈ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ವಾರ್ಡ್ ಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ಜಾಗೃತಿ ಮೂಲಕ ಹೆಚ್ಚಿನ ಜನರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುವ ನಿರೀಕ್ಷೆಯಿದೆ.
ಅಂಗಾಂಗ ದಾನ ಜಾಗೃತಿ ಕಾರ್ಯಕ್ರಮವನ್ನು ಸಿಡಿಎಸ್ ಅಧ್ಯಕ್ಷೆ ಶೀನಾ ಯು.ಎಂ, ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎಚ್. ಸುರೇಶ್ ಹಾಗೂ ಸಿ.ಕೆ. ವಿನೋದನ್ ಮಾಸ್ತರ್ ಎಂಬವರು ಸಂಯೋಜಿಸುತ್ತಿದ್ದಾರೆ. ಈ ಮೂಲಕ ಪಂಚಾಯತಿನ 19 ವಾರ್ಡ್ ಗಳಲ್ಲಿ ಸಮನ್ವಯಾಧಿಕಾರಿಗಳನ್ನು ನೇಮಿಸಿ ಜಾಗೃತಿ ಕಾರ್ಯವನ್ನು ವಿಸ್ತರಿಸಲಾಗುತ್ತಿದೆ. ಮುಂದಿನ ಹಂತವಾಗಿ ಸಾಮಾನ್ಯ ಸಭೆಯನ್ನು ಕರೆದು ಜೂನ್ 25ರಿಂದ ಜುಲೈ 5ರವರೆಗೆ ಅಂಗಾಂಗ ದಾನದ ಕುರಿತಾದ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಬಳಿಕ ಎಲ್ಲ 364 ಕುಟುಂಬಶ್ರೀ ಘಟಕಗಳ ಸಭೆ ನಡೆಯಲಿದೆ. ಬಳಿಕ ಈ ಬಗ್ಗೆ ಅಧಿಸೂಚನೆಗಳನ್ನು ಕಳುಹಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕುಟುಂಬಶ್ರೀ ಸದಸ್ಯರು ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರೂ ಭಾಗವಹಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಡಿಎಸ್ ಅಧ್ಯಕ್ಷೆ ಶೀನಾ ಯು.ಎಂ, ಯಾವುದೇ ಭರವಸೆಯಿಲ್ಲದೆ ಆರಂಭವಾದ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಟುಂಬಶ್ರೀಯ ಇಪ್ಪತ್ತೈದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶೇಷವಾಗಿ ಏನು ಮಾಡಬಹುದು ಎಂದು ಯೋಚಿಸಿದಾಗ ಈ ಒಂದು ಯೋಜನೆ ನಮ್ಮ ಮನಸ್ಸಿಗೆ ಬಂದಿದೆ. ಈ ಬಗ್ಗೆ ಸಿಡಿಎಸ್ ಸದಸ್ಯರಲ್ಲಿ ಚರ್ಚೆ ನಡೆಸಿದಾಗ ಒಪ್ಪಿಗೆ ಸೂಚಿಸಿದರು. ಅಲ್ಲದೆ ಪಂಚಾಯತ್ ಅಧಿಕಾರಿಗಳು ನಮ್ಮ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡಿದರು. ಇನ್ನು, ಈ ಯೋಜನೆಯಲ್ಲಿ ಪುರುಷರನ್ನೂ ಒಳಗೊಂಡು ಕಾರ್ಯಕ್ರಮ ನಡೆಸಲು ಕುಟುಂಬಶ್ರೀ ಪ್ರಯತ್ನಿಸುತ್ತಿದೆ.
ಅಂಗಾಂಗ ದಾನವು ಅದೆಷ್ಟೋ ಜೀವವನ್ನು ಉಳಿಸಲು ಸಹಕಾರಿಯಾಗಿದೆ. ನಮ್ಮ ಅಂಗಾಂಗಗಳಾದ ಹೃದಯ, ಯಕೃತ್ತು, ಮೂತ್ರಪಿಂಡಗಳು, ಶ್ವಾಸಕೋಶಗಳು ಮತ್ತು ಮೇಧೋಜಿರಕ ಗ್ರಂಥಿಯಂತಹ ಪ್ರಮುಖ ಅಂಗಗಳನ್ನು ಕಸಿ ಮಾಡಿ ಜೀವ ಉಳಿಸಬಹುದು. ಮೃತರ ದೇಹದಿಂದ ಸುಮಾರು 12ರಿಂದ 24 ಗಂಟೆಗಳ ಒಳಗೆ ಅಂಗಗಳನ್ನು ತೆಗೆಯಬಹುದು. ಕೆಲವು ಅಂಗಗಳಿಗೆ ಸೀಮಿತ ಜೀವಿತಾವಧಿ ಇರುವುದರಿಂದ ತ್ವರಿತವಾಗಿ ತೆಗೆಯುವ ಕಾರ್ಯ ಮಾಡಬೇಕಾಗುತ್ತದೆ. ಹೃದಯವು 4ರಿಂದ6 ಗಂಟೆಗಳು, ಯಕೃತ್ತು 12ರಿಂದ 24 ಗಂಟೆಗಳು, ಮೂತ್ರಪಿಂಡ 48ರಿಂದ 72 ಗಂಟೆಗಳು, ಶ್ವಾಸಕೋಶ 4ರಿಂದ6 ಗಂಟೆಗಳ ಜೀವಿತಾವಧಿಯನ್ನು ಹೊಂದಿದೆ.