Nitin Menon: ಕಳೆದ ಮೂರು ವರ್ಷಗಳಲ್ಲಿ ಹಲವು ಪಂದ್ಯಗಳಲ್ಲಿ ಅಂಪೈರ್ ಪಾತ್ರ ನಿರ್ವಹಿಸಿರುವ ನಿತಿನ್ ಇದೀಗ ಭಾರತ ತಂಡದ ಸ್ಟಾರ್ ಆಟಗಾರರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ.
ಕ್ರಿಕೆಟ್‌ನಲ್ಲಿ ಅಂಪೈರ್ (Umpire ) ಆಗುವುದು ಅಂದುಕೊಂಡಷ್ಟು ಸುಲಭವಲ್ಲ. ದೊಡ್ಡ ತಂಡಗಳು, ಸ್ಟಾರ್ ಆಟಗಾರರ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಂಪೈರ್‌ಗಳು ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಏಕೆಂದರೆ ಒಬ್ಬ ಅಂಪೈರ್ ಅಚ್ಚಾನಕ್ಕಾಗಿ ನೀಡಿದ ಒಂದು ತಪ್ಪು ನಿರ್ಧಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕತ್ತದೆ. ಹೀಗಾಗಿ ಕ್ರಿಕೆಟ್‌ನಲ್ಲಿ ಅಂಪೈರ್ ಆಗಲು ಸಾಕಷ್ಟು ತಿಳುವಳಿಕೆ ಇರಬೇಕು ಹಾಗೆಯೇ ಯಾವುದೇ ಒತ್ತಡದ ಸನ್ನಿವೇಷನ್ನು ಎದುರಿಸುವ ಧೃಡತೆ ಇರಬೇಕು. ಅದರಲ್ಲೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಥವಾ ಐಸಿಸಿ (ICC) ಈವೆಂಟ್ಗಳಲ್ಲಿ ಅಂಪೈರಿಂಗ್ ಮಾಡಬೇಕೆಂದರೆ, ಸಾಕಷ್ಟು ಅನುಭವವಿರಬೇಕು. ಸದ್ಯ ಐಸಿಸಿ ಈವೆಂಟ್ಗಳಲ್ಲಿ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದಿಂದ ನಿತಿನ್ ಮೆನನ್ (Nitin Menon) ಕೂಡ ಅಂಪೈರಿಂಗ್ ಮಾಡುತ್ತಿದ್ದು, ಇದು ಭಾರತ ಕ್ರಿಕೆಟ್ಗೆ ಹೆಮ್ಮೆಯ ವಿಚಾರವಾಗಿದೆ. ಇದೀಗ ನಡೆಯುತ್ತಿರುವ ಆಶಸ್ (Ashes series) ಸರಣಿಯ ಕೊನೆಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಕೆಲಸ ನಿರ್ವಹಿಸಲು ಆಯ್ಕೆಯಾಗಿರುವ ನಿತಿನ್ ತಮ್ಮ ವೃತ್ತಿಬದುಕಿನ ಬಗ್ಗೆ ಸವಿವರವಾಗಿ ಮಾತನಾಡಿದ್ದಾರೆ.
ಅದರಲ್ಲೂ ಕಳೆದ ಮೂರು ವರ್ಷಗಳಲ್ಲಿ ಹಲವು ಪಂದ್ಯಗಳಲ್ಲಿ ಅಂಪೈರ್ ಪಾತ್ರ ನಿರ್ವಹಿಸಿರುವ ನಿತಿನ್ ಇದೀಗ ಭಾರತ ತಂಡದ ಸ್ಟಾರ್ ಆಟಗಾರರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ. ‘ಕಳೆದ ಮೂರು ವರ್ಷಗಳ ಒತ್ತಡದ ಸನ್ನಿವೇಶವು ಐಸಿಸಿ ಎಲೈಟ್ ಪ್ಯಾನೆಲ್ ಅಂಪೈರಿಂಗ್ ಬೆಳವಣಿಗೆಗೆ ಸಹಾಯ ಮಾಡಿದೆ’ ಎಂದು ಮೆನನ್ ಹೇಳಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಕಳೆದ ಎರಡು ಟಿ20 ವಿಶ್ವಕಪ್‌ಗಳಲ್ಲಿ ನಿತಿನ್ ಮೆನನ್ ಅಂಪೈರಿಂಗ್ ಮಾಡುವ ಅವಕಾಶ ಪಡೆದಿದ್ದರು.
ನಿತಿನ್ ಮೆನನ್ ಇದುವರೆಗೆ 15 ಟೆಸ್ಟ್, 24 ಏಕದಿನ ಮತ್ತು 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಮೆನನ್ ಈಗ ಅಂತಿಮ ಮೂರು ಆಶಸ್ ಟೆಸ್ಟ್‌ಗಳಲ್ಲಿ ಅಂಪೈರ್ ಮಾಡಲು ಸಿದ್ಧರಾಗಿದ್ದು, ಹೈವೋಲ್ಟೇಜ್ ಪಂದ್ಯದಲ್ಲಿ ಅಂಪೈರ್ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ಹೇಳಿದ್ದಾರೆ. “ಇದೊಂದು ಉತ್ತಮ ಸರಣಿ. ನಾನು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳಲ್ಲಿ ಅಂಪೈರ್ ಮಾಡಿದ್ದೇನೆ. ಆದರೆ ನಾನು ಮೂಲಭೂತ ಅಂಶಗಳನ್ನು ಕೇಂದ್ರೀಕರಿಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ.
ಟೀಂ ಇಂಡಿಯಾದ ಹಿರಿಯ ಆಟಗಾರರು ಒತ್ತಡ ಹೇರುತ್ತಾರೆ
ಇನ್ನು ಟೀಂ ಇಂಡಿಯಾದ ಹಿರಿಯ ಆಟಗಾರರ ಬಗ್ಗೆ ಪಿಟಿಐ ಜೊತೆ ಮುಕ್ತವಾಗಿ ಮಾತನಾಡಿರುವ ನಿತಿನ್ ಮೆನನ್, ‘ಭಾರತದಲ್ಲಿ ಒತ್ತಡದ ಸನ್ನಿವೇಶದಲ್ಲಿ ಅಂಪೈರಿಂಗ್ ಮಾಡಿದ ನಂತರ ವಿದೇಶಿ ಪಂದ್ಯಗಳಲ್ಲಿ ಅಂಪೈರ್ ಮಾಡುವುದು ಸುಲಭವಾಗಿದೆ. ಟೀಂ ಇಂಡಿಯಾ, ಭಾರತದಲ್ಲಿ ಆಡುವಾಗ ಸಾಕಷ್ಟು ಒತ್ತಡ ಇರುತ್ತದೆ. ಟೀಂ ಇಂಡಿಯಾದ ಅನುಭವಿ ಆಟಗಾರರು ಯಾವಾಗಲೂ ಒತ್ತಡ ಹೇರಲು ಪ್ರಯತ್ನಿಸುತ್ತಾರೆ. 50-50 ನಿರ್ಧಾರಗಳನ್ನು ಟೀಂ ಇಂಡಿಯಾದ ಪರವಾಗಿ ನೀಡಬೇಕು ಎಂದು ಟೀಂ ಇಂಡಿಯಾ ಆಟಗಾರರು ಒತ್ತಡ ಹೇರುತ್ತಾರೆ. ಆದರೆ ನಾವು ಆ ಒತ್ತಡಕ್ಕೆ ಮಣಿಯುವುದಿಲ್ಲ.
ಎಲ್ಲ ಪರಿಸ್ಥಿತಿಯನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಇದು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮತ್ತೊಂದೆಡೆ, ಅಂಪೈರ್‌ಗಳು ಆಟಗಾರರಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು. ಏಕೆಂದರೆ ಆರರಿಂದ ಏಳು ಗಂಟೆಗಳ ಕಾಲ ಮೈದಾನದಲ್ಲಿ ನಿಲ್ಲಬೇಕು. ಅದಕ್ಕಾಗಿಯೇ ನಾನು ವಾರದಲ್ಲಿ ಆರು ದಿನ 75 ನಿಮಿಷಗಳ ಕಾಲ ಜಿಮ್‌ನಲ್ಲಿ ಬೆವರು ಹರಿಸುತ್ತೇನೆ’ ಎಂದು ಮೆನನ್ ಹೇಳಿದರು.