ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ರಾತ್ರೋರಾತ್ರಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಸ್ಪರ್ಧಿಯನ್ನು ಪೊಲೀಸರು ಬಂಧಿಸಿದ ಮೊದಲ ಪ್ರಕರಣ ಇದಾಗಿದೆ.
ಬಿಗ್ ಬಾಸ್ ಸೀಸರ್ ೧೦ರ ರಿಯಾಲಟಿ ಶೋ ವೇಳೆ ಹುಲಿ ಉಗುರು ಧರಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿದೆ.
ಬಿಗ್ ಬಾಸ್ ಮನೆಯಿಂದ ಸಂತೋಷ್ ಅವರನ್ನು ಕರೆ ತಂದ ರಾಮೋಹಳ್ಳಿ ಅರಣ್ಯಾಧಿಕಾರಿಗಳು ವನ್ಯ ಜೀವಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಬಂಧಿಸಿದ್ದಾರೆ.
ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ಹಾಕಿಕೊಂಡಿದ್ದರು. ಈ ಕುರಿತು ಎಫ್ಐಆರ್ ದಾಖಲಾಗಿತ್ತು. ವೈಲ್ಡ್ ಲೈಫ್ ಪ್ರೊಟೆಕ್ಷನ್ ಆಕ್ಟ್ ಅಡಿ ಬಂಧನವಾಗಿದೆ ಈ ಹಿನ್ನೆಲೆ ವರ್ತೂರು ಸಂತೋಷ್ ನನ್ನ ಬಂಧಿಸಿರುವ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ವರ್ತೂರು ಸಂತೋಷ್ ಧರಿಸಿದ್ದ ಹುಲಿ ಉಗುರು ಪೆಂಡೆಂಟ್ ನಕಲಿಯೋ ಅಸಲಿಯೋ ಎಂಬುದು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ಒಂದು ವೇಳೆ ಇದು ನಿಜವಾದ ಹುಲಿ ಉಗುರು ಆಗಿದ್ದರೆ ಹೇಗೆ ಅವರ ಬಳಿ ಬಂದಿತು ಎಂದು ಪರಿಶೀಲನೆ ನಡೆಯಲಿದೆ. ಹುಲಿಯನ್ನು ಕೊಂದು ಉಗುರು ಸಂಪಾದಿಸಿದ್ದು ದೃಢಪಟ್ಟರೆ ೫ ವರ್ಷ ಶಿಕ್ಷೆ, ೫೦ ಲಕ್ಷ ರೂ. ದಂಡದ ಶಿಕ್ಷೆಗೆ ಒಳಗಾಗಬೇಕಾಗುತ್ತದೆ.
ವರ್ತೂರು ಸಂತೋಷ್ ಅವರು ಹಲವು ಪ್ರಾಣಿಗಳನ್ನು ಸಾಕಿದ್ದಾರೆ. ಹಳ್ಳಿಕಾರ್ ಕ್ಯಾಟಲ್ ಬ್ರೀಡ್ನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇದಲ್ಲದೆ ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಸಂತೋಷ್ ಕತ್ತಿಗೆ ಒಂದು ಚೈನ್ ಹಾಕಿದ್ದರು. ಇದರಲ್ಲಿ ಹುಲಿಯ ಉಗುರು ಕಾಣಿಸಿದೆ. ಈ ಕಾರಣದಿಂದಲೇ ಅವರನ್ನು ಅರೆಸ್ಟ್ ಮಾಡಲಾಗಿದೆ. ಟಿವಿಯಲ್ಲಿ ಹುಲಿ ಉಗುರು ಪೆಂಡೆಂಟ್ ಹಾಕಿಕೊಂಡ ದೃಶ್ಯವನ್ನು ಗಮನಿಸಿ ಕ್ರಮ ಕೈಗೊಳ್ಳಲಾಗಿದೆ.
ಸಂತೋಷ್ ಅವರನ್ನು ಕಗ್ಗಲಿಪುರ ಅರಣ್ಯ ಇಲಾಖೆ ಕಚೇರಿಯಲ್ಲಿಟ್ಟು ವಿಚಾರಿಸಲಾಗುತ್ತಿದೆ. ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎಂದು ಬೆಂಗಳೂರು ಅರಣ್ಯ ಸಂರಕ್ಷಣಾ ಅಧಿಕಾರಿ ರವೀಂದ್ರ ತಿಳಿಸಿದ್ದಾರೆ.