ಶಿವಮೊಗ್ಗ: ಮನೆಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ, ಗಾಯಾಳು ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಮನೆಯಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ, ಗಾಯಾಳು ಆಸ್ಪತ್ರೆಗೆ ದಾಖಲು

ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹುಲಿ ದಾಳಿ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ: ತಡರಾತ್ರಿ ಮನೆಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ‌ ನಡೆಸಿರುವ ಘಟನೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಬ್ಯಾಕೋಡು ಸಮೀಪದ ಎಸ್.ಎಸ್.ಬೋಗ್ ಗ್ರಾಮದಲ್ಲಿ ನಡೆದಿದೆ.

ಇಲ್ಲಿನ ಮರಾಠಿ ಗ್ರಾಮದ ಗಣೇಶ್ (47) ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬುಧವಾರ ರಾತ್ರಿ ಸುಮಾರು 3 ಗಂಟೆಗೆ ಘಟನೆ ನಡೆದಿದೆ. ಗಣೇಶ್ ತಮ್ಮ ಗುಡಿಸಲಿನಲ್ಲಿ ಮಲಗಿದ್ದರು. ಈ ವೇಳೆ ನುಗ್ಗಿದ ಹುಲಿ ದಾಳಿ ನಡೆಸಿದೆ. ಇದರಿಂದಾಗಿ ಗಣೇಶ್ ಅವರ ಬಲಗೈಗೆ ಗಂಭೀರ ಸ್ವರೂಪದ ಗಾಯವಾಗಿದೆ. ಹುಲಿ‌ ಕಂಡ ಕೂಡಲೇ ಅವರು ಜೋರಾಗಿ ಕಿರುಚಿಕೊಂಡಿದ್ದಾರೆ. ಇದರಿಂದ ಬೆದರಿದ ಹುಲಿ ಸ್ಥಳದಿಂದ ಓಡಿಹೋಗಿದೆ.

ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಿದ್ದಾರೆ. ಗಾಯಾಳುವನ್ನು ಕುಂದಾಪುರದ ಸರ್ಕಾರಿ‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಶೋಧ ನಡೆಸಿದ್ದಾರೆ. ಆದರೆ ಹುಲಿ ಪತ್ತೆಯಾಗಿಲ್ಲ.

ಹುಲಿ ಸೆರೆಗೆ ಆಗ್ರಹ : ಹುಲಿ ದಾಳಿಯಿಂದಾಗಿ ಮರಾಠಿ ಗ್ರಾಮದ ಜನರು ಭಯಭೀತರಾಗಿದ್ದಾರೆ. ಗ್ರಾಮವು ಕಾಡಿಗೆ ಹೊಂದಿಕೊಂಡಂತಿದೆ. ಅನೇಕ ಕಾಡು ಪ್ರಾಣಿಗಳಿವೆ. ಈಗ ಹುಲಿ ದಾಳಿ ನಡೆಸಿರುವ ಗ್ರಾಮಸ್ಥರದಲ್ಲಿ ಭೀತಿ ಉಂಟುಮಾಡಿದೆ. ಅರಣ್ಯ ಇಲಾಖೆ ತಕ್ಷಣ ಹುಲಿ ಹುಡುಕಿ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಹಿಳೆ ಮೇಲೆ ಹುಲಿ ದಾಳಿ : ಮಲೆನಾಡಿನ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮುಳ್ಳಯನ್ಯಗಿರಿ ತಪ್ಪಲಿನಲ್ಲಿ ಹುಲಿ ಕಾಟ ಆರಂಭವಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಹುಲಿ ಕಾಣಿಸಿಕೊಂಡು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಮತ್ತೆ ಹುಲಿ ಕಾಟ ಆರಂಭವಾಗಿದ್ದು, ಜನರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ.

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಪಂಡರವಳ್ಳಿಯಲ್ಲಿ ಮಹಿಳೆ ಮೇಲೆ ಹುಲಿ ದಾಳಿ ಮಾಡಿತ್ತು. ಇಲ್ಲಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ ಮಾಡಿತ್ತು. ಮಹಿಳೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಹುಲಿ ದಾಳಿ ನಡೆಸಿತ್ತು. ಇದರಿಂದಾಗಿ ಮಹಿಳೆಯ ಮುಖ ಹಾಗೂ ಹಣೆಗೆ ಗಂಭೀರ ಗಾಯಗಳಾಗಿತ್ತು. ಕಾಫಿ ತೋಟದಲ್ಲಿದ್ದ ಇತರೆ ಕಾರ್ಮಿಕರು ಕೂಗಾಡಿದ್ದರಿಂದ ಹುಲಿ ಕಾಫಿ ತೋಟದಲ್ಲಿ ತಪ್ಪಿಸಿಕೊಂಡಿತ್ತು. ಹುಲಿ ಹೋಗುತ್ತಿದ್ದಂತೆ ಕಾರ್ಮಿಕರು ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಹುಲಿ ಸೆರೆ ಹಿಡಿಯುವ ಭರವಸೆ ನೀಡಿದ್ದರು.

ಕಾಡಾನೆ ಜೊತೆ ಹುಲಿ ಕಾಟ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ 6 ತಿಂಗಳುಗಳಿಂದ ಹುಲಿ ದಾಳಿ ಮುಂದುವರೆದಿದೆ. ಹುಲಿ ದಾಳಿ ಮುಂದುವರೆದಿರುವುದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಇತ್ತೀಚೆಗೆ ಹುಲಿಯೊಂದು ಹಸುವನ್ನು ಬಲಿ ಪಡೆದಿತ್ತು. ಹುಲಿ ಜೊತೆಗೆ ಕಾಡಾನೆಗಳು ತೋಟಕ್ಕೆ ಲಗ್ಗೆ ಇಟ್ಟಿವೆ.

Leave a Reply

Your email address will not be published. Required fields are marked *