ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದ ಬೆನ್ನಲ್ಲೇ ಮತ್ತೊಂದು ಪ್ರಕರಣ ನಡೆದಿದೆ. ಗೋವಿನ ಚರ್ಮ ಸಾಗಾಟ ತಡೆದ ವ್ಯಕ್ತಿಯೊಬ್ಬನ ಮೇಲೆ ಯುವಕರ ತಂಡವೊಂದು ಶಿಕಾರಿಪುರ ಪೊಲೀಸ್ ಠಾಣೆಯ ಎದುರೇ ಹಲ್ಲೆ ನಡೆಸಿದೆ.

ಶಿವಮೊಗ್ಗ: ಗೋವಿನ ಚರ್ಮ ಸಾಗಾಟ ತಡೆದ ವ್ಯಕ್ತಿಯೊಬ್ಬನ ಮೇಲೆ ಗುಂಪೊಂದು ಪೊಲೀಸ್ ಠಾಣೆ ಎದುರೇ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಶಿಕಾರಿಪುರದಲ್ಲಿ (Shikaripur) ನಡೆದಿದೆ. ಅಕ್ರಮವಾಗಿ ಚರ್ಮ ಸಾಗಿಸುತ್ತಿದ್ದ ವಿಚಾರ ತಿಳಿದ ಗುಂಪೊಂದು ಅದನ್ನು ತಡೆದು ಪೊಲೀಸ್ ಠಾಣೆಗೆ ಒಪ್ಪಿಸಿದೆ. ಈ ವಿಚಾರವಾಗಿ ಯುವಕರ ಮತ್ತೊಂದು ತಂಡ ಪೊಲೀಸರ ಎದುರೇ ಹಲ್ಲೆ ನಡೆಸಿದೆ.

ಬಕ್ರಿದ್ ಹಬ್ಬದ ಪ್ರಯುಕ್ತ ಗೋವನ್ನು ಹತ್ಯೆ ಮಾಡಿ ಅದರ ಚರ್ಮವನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಗುಂಪೊಂದು ಅದನ್ನು ತಡೆದು ಶಿಕಾರಿಪುರ ಠಾಣಾ ಪೊಲೀಸರ ವಶಕ್ಕೆ ನೀಡಿದೆ. ಈ ವಿಚಾರ ತಿಳಿಯುತ್ತಿದ್ದಂತೆ ದೊಡ್ಡ ಸಂಖ್ಯೆಯ ಗುಂಪೊಂದು ಪೊಲೀಸ್ ಠಾಣೆ ಎದುರು ಜಮಾಯಿಸಿ ಅಕ್ರಮ ಸಾಗಾಟ ತಡೆದ ಗುಂಪಿನ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾದ ಹಿನ್ನೆಲೆ ಪೊಲೀಸರು ಗುಂಪನ್ನು ಚದುರಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ, ಜಿಲ್ಲೆಯಲ್ಲಿ ಒಂದೇ ದಿನ ಎರಡು ಕಡೆಗಳಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದು ಮೂವರು ಗಾಯಗೊಂಡಿದ್ದರು. ಶಿವಮೊಗ್ಗ ನಗರದ ಗೋಪಾಳದ ದ್ರೌಪದಮ್ಮ ಸರ್ಕಲ್​ನಲ್ಲಿ ನಡೆದ ಘಟನೆಯಲ್ಲಿ, ಮಾತನಾಡುವ ನೆಪದಲ್ಲಿ ವ್ಯಕ್ತಿಯೊಬ್ಬನನ್ನು ಕರೆದು ಹಲ್ಲೆ ಮಾಡಲಾಗಿತ್ತು. ಈ ವೇಳೆ ಎರಡು ಗುಂಪುಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದಿದೆ. ನಂತರ ಬೈಕ್‌ನಲ್ಲಿ ವಾಪಸಾಗಲು ಮುಂದಾದ ವ್ಯಕ್ತಿಗೆ ಭರ್ಜಿಯಿಂದ ಚುಚ್ಚಲಾಗಿತ್ತು.

ಗೋಪಾಳದ ವಿನಾಯಕ ಸರ್ಕಲ್​ನಲ್ಲಿ ಗೂಡ್ಸ್ ಆಟೋಗೆ ಬೈಕ್ ತಾಗಿದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿತ್ತು. ಎರಡು ಪ್ರಕರಣಗಳಲ್ಲಿ ಗಾಯಗೊಂಡ ಮೂವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

Leave a Reply

Your email address will not be published. Required fields are marked *

Latest News