ಶಿವಮೊಗ್ಗದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ, 60ಕ್ಕೂ ಹೆಚ್ಚು ಜನರ ಬಂಧನ

ಶಿವಮೊಗ್ಗದಲ್ಲಿ ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ: ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ, 60ಕ್ಕೂ ಹೆಚ್ಚು ಜನರ ಬಂಧನ

ಪ್ರತಿಭಟನೆ ವೇಳೆ 60ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ನಂತರ ಬಿಡುಗಡೆ ಮಾಡಿದ್ದಾರೆ.

ಶಿವಮೊಗ್ಗ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ಶಿವಮೊಗ್ಗದ ಕೆ.ಇ.ಬಿ ವೃತ್ತದಲ್ಲಿ ಇಂದು ಶಿವಮೊಗ್ಗ ನಗರ ಬಿಜೆಪಿ ಘಟಕದ ವತಿಯಿಂದ ವಿದ್ಯುತ್ ದರ ಏರಿಕೆ ಖಂಡಿಸಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಮ್ಮಿಕೊಳ್ಳಲಾಗಿತ್ತು. ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಪ್ರತಿಭಟನೆಯ ನಂತರ ಶಿವಮೊಗ್ಗ ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಅವರು ಕರೆ ನೀಡುತ್ತಿದ್ದಂತೆ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.

ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ್ದಾರೆ. ಆದರೂ ಕಾರ್ಯಕರ್ತರು ಪೊಲೀಸರ ಬ್ಯಾರಿಕೇಡ್​ಗಳನ್ನು ತಳ್ಳಿ ಪೊಲೀಸರನ್ನೂ ನೂಕಿ ಒಳಗೆ ನುಗ್ಗಿದ್ದಾರೆ. ಕಚೇರಿ ಪ್ರವೇಶ ದ್ವಾರದ ಬಳಿ ಹಾಕಿದ್ದ ಬ್ಯಾರಿಕೇಡ್ ಅನ್ನು ಸಹ ತಳ್ಳಿ ಕಾರ್ಯಕರ್ತರು ಮುಂದೆ ಹೋಗಿದ್ದಾರೆ. ಏಕಾಏಕಿ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಂತೆ ಕಾರ್ಯಕರ್ತನೋರ್ವ ಕಚೇರಿ ಮುಂಭಾಗದ ಗಾಜಿಗೆ ಕಲ್ಲು ತೂರಾಟ ಮಾಡಿದ್ದಾನೆ.

ಆತನನ್ನು ಪೊಲೀಸರು ಹಿಂದೆ ಕರೆದುಕೊಂಡು ಹೋಗುತ್ತಿದ್ದಂತಯೇ ಆತನೇ ಮತ್ತೆ ಬಂದು ಕಚೇರಿಯ ಇನ್ನೊಂದು ಭಾಗದ ಗಾಜಿಗೆ ಕಲ್ಲು ತೂರಾಟ ನಡೆಸಿದ್ದಾನೆ. ಈ ವೇಳೆ ಕಲ್ಲು ಕಚೇರಿ ಒಳಗೆ ನುಗ್ಗಿದ್ದು, ಈ ವೇಳೆ ಕೊಠಡಿಯಲ್ಲಿ ಯಾರೂ ಇಲ್ಲದ ಕಾರಣ, ಯಾವುದೇ ಅನಾಹುತ ಸಂಭವಿಸಿಲ್ಲ. ಇತ್ತ ಪೊಲೀಸರು ಕಾರ್ಯಕರ್ತರನ್ನು ಬಂಧಿಸುತ್ತಿದ್ದಂತೆಯೇ ಕಚೇರಿ ಒಳ ಭಾಗಕ್ಕೆ ನುಗ್ಗಿದವರು ಕಚೇರಿಯ ನೋಟಿಸ್ ಬೋರ್ಡ್ ಅನ್ನು ಕೂಡ ಒಡೆದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

60 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ, ಬಿಡುಗಡೆ: ಪ್ರತಿಭಟನಾಕಾರರು ಕಚೇರಿ ಒಳಗೆ ನುಗ್ಗಿ ಕಲ್ಲು ತೂರಾಟ ನಡೆಸುತ್ತಿದ್ದಂತೆ ಶಾಸಕ ಚನ್ನಬಸಪ್ಪ, ಮೇಯರ್ ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಕಾರ್ಪೋರೇಟರ್​ ವಿಶ್ವಾಸ್ ಸೇರಿದಂತೆ ಸುಮಾರು‌ 60ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯುತ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಹಗಲು ದರೋಡೆಗೆ ನಿಂತಿದೆ. ಮೆಸ್ಕಾಂ ಸೇರಿದಂತೆ ಎಲ್ಲಾ ಘಟಕಗಳು ಪ್ರತಿ ವರ್ಷ ವಿದ್ಯುತ್ ದರ ಏರಿಕೆ ಮಾಡುತ್ತಿವೆ. ಇಷ್ಟೊಂದು ನಷ್ಟದ ಹಾದಿಯ ಮೆಸ್ಕಾಂನಂತಹವುಗಳನ್ನು ಮುಚ್ಚಬೇಕು. ನಮ್ಮ ವಿಐಎಸ್‌ಎಲ್ ಎಂಪಿಎಂ ಈಗ ನಷ್ಟದ ಹಾದಿಯಲ್ಲಿ ಮುಚ್ಚುವ ಸ್ಥಿತಿಯಲ್ಲಿದೆ. ಅದೇ ರೀತಿ ಮೆಸ್ಕಾಂ ಅನ್ನು ಮುಚ್ಚಿಬಿಡಿ. ಇಂತಹ ಸಂಸ್ಥೆಗಳು ನಮಗೆ ಬೇಡ ಎಂದು ಶಾಸಕ ಚನ್ನಬಸಪ್ಪ ವಾಗ್ದಾಳಿ ನಡೆಸಿದರು.

ಇನ್ನು ಕಲ್ಲು ತೂರಾಟ ‌ನಡೆಸಿದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಇಇ ವಿಜಯೇಂದ್ರ, ಇಂದು ನಡೆಸಿದ ಹೋರಾಟದ ಕುರಿತು ನಮಗೆ ಯಾವುದೇ ಮಾಹಿತಿ ಇರಲಿಲ್ಲ. ಅಲ್ಲದೆ, ನಮ್ಮ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದ ನಮ್ಮ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *