ಶಾಸಕ ಪ್ರದೀಪ್ ಈಶ್ವರ್ ಸಹಾಯವನ್ನು ಕೇಳಿ 500 ಕಿ.ಮೀ. ದೂರದಿಂದ ಬಂದವರು ಬರೀಗೈಲಿ ವಾಪಸ್
ಚಿಕ್ಕಬಳ್ಳಾಪುರ: ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದ ಮೂಲಕ ನೂತನ ಶಾಸಕ ಪ್ರದೀಪ್ ಈಶ್ವರ್ ಜನರಿಗೆ, ವಿದ್ಯಾ ರ್ಥಿಗಳಿಗೆ, ಅಸಹಾ ಯಕ ರಿಗೆ ಹಣಕಾಸಿನ ನೆರವಿನ ಬಗ್ಗೆ ನೀಡುತ್ತಿರುವ ಆಶ್ವಾಸನೆ, ಭರವಸೆಗಳ ಮಹಾ ಪೂರದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
ಇದರ ಬೆನ್ನಲ್ಲೇ ಅವರ ಬಳಿಯಿಂದ ಪರಿಹಾರ ಪಡೆಯಲು ಕಲಬುರಗಿಯಿಂದ ಬಂದ ಬಡ ಕುಟುಂಬ ಅವರ ಸಂಪರ್ಕ ಸಾಧ್ಯವಾಗದೇ ಬರಿಗೈಯಲ್ಲಿ ವಾಪಸ್ ಆಗಿರುವ ಘಟನೆ ನಡೆದಿದೆ.
60 ವರ್ಷದ ವೃದ್ಧೆ ಕಮಲಾಬಾಯಿ ಹಾಗೂ ಆಕೆಯ ಪುತ್ರ ಮಂಜುನಾಥ ಶಾಸಕ ಪ್ರದೀಪ್ ಈಶ್ವರ್ ಬಳಿ ಆರ್ಥಿಕ ನೆರವು ಪಡೆಯಲೆಂದು 500 ಕಿ.ಮೀ. ದೂರದ ಕಲಬುರಗಿಯಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಶಾಸಕರ ದರ್ಶನ ಸಿಗದ ಕಾರಣ ನಿರಾಸೆಯಲ್ಲಿ ವಾಪಸ್ ತೆರಳಿದ್ದಾರೆ.
ಏನಿದು ಘಟನೆ: ಕಲುಬುರಗಿಯ ಕಮಲಾಬಾಯಿ ಪುತ್ರ ಮಂಜುನಾಥ ಒಂದೂವರೆ ವರ್ಷದ ಹಿಂದೆ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ವೇಳೆ ಚಿಕಿತ್ಸೆಗೆ ಬಡ ಕುಟುಂಬ ಸಾಲ ಸೋಲ ಮಾಡಿ ಆರೇಳು ಲಕ್ಷ ವೆಚ್ಚ ಮಾಡಿದ್ದು, ಕುಟುಂಬ ನಿರ್ವಹಣೆಗೆ ಕಷ್ಟವಾಗಿತ್ತು. ಅಲ್ಲದೇ ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಹಾಕಿದರೂ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಆಗ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಬಳಿ ತೆರಳಿದ್ದಾಗಲೂ ಕೂಡ ಆ ಕುಟುಂಬಕ್ಕೆ ಪ್ರಯೋಜನವಾಗಲಿಲ್ಲ ಅಂತೆ. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನೂತನ ಶಾಸಕರಾಗಿರುವ ಪ್ರದೀಪ್ ಈಶ್ವರ್, ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮ ಮೂಲಕ ಬಡವರಿಗೆ ಸಹಾಯ ಮಾಡುವುದಾಗಿ ಹೇಳುವ ವಿಡಿಯೋಗಳು ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ಬೆನ್ನಲ್ಲೇ ಅವರ ಬಳಿ ಸಹಾಯಕ್ಕೆ ಹುಡುಕಿಕೊಂಡು ಬಂದ ಈ ಕುಟುಂಬಕ್ಕೆ ಶಾಸಕ ಪ್ರದೀಪ್ ಈಶ್ವರ್ ಸಂಪರ್ಕಕ್ಕೆ ಸಿಗದೇ ವಾಪಸ್ ತೆರಳಿದೆ.
“ಫೋನ್ ಮಾಡಿದರೂ ಶಾಸಕರು ಕರೆ ಸ್ವೀಕರಿಸಲಿಲ್ಲ’ : ಶಾಸಕ ಪ್ರದೀಪ್ ಈಶ್ವರ್ ಬಹಳ ಮಂದಿಗೆ ಸಹಾಯ ಮಾಡುತ್ತಿದ್ದಾರೆಂದು ನಮಗೆ ತಿಳಿದುಬಂತು. ಅದಕ್ಕೆ ಅವರನ್ನು ಭೇಟಿ ಆಗೋಣ ಅಂತ ಚಿಕ್ಕಬಳ್ಳಾಪುರಕ್ಕೆ ಬಂದೆವು. ಅವರನ್ನು ಫೋನ್ ಮೂಲಕ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ ಎಂದು ಪುತ್ರ ಮಂಜುನಾಥ ಜೊತೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ವೃದ್ಧೆ ಕಮಲಾಬಾಯಿ ವಿವರಿಸಿದರು.
ವಿಧಾನಸೌಧಕ್ಕೆ ಅಲೆದಾಡಿ ಸಾಕಾಯಿತು, ಪ್ರದೀಪ್ ಈಶ್ವರ್ ಬಳಿ ನೆರವು ಪಡೆಯೋಣ ಅಂತ ಬಂದರೂ ಸಾಧ್ಯವಾಗುತ್ತಿಲ್ಲ. ನಮ್ಮ ಕುಟುಂಬ ತುಂಬ ಸಂಕಷ್ಟದಲ್ಲಿದೆ. ನಮ್ಮ ಕಷ್ಟ ನೋಡಿ ವಿಧಾನಸೌಧಕ್ಕೆ ಹೋಗಿದ್ದಾಗ ಅಧಿಕಾರಿಗಳು ಒಂದಿಷ್ಟು ಹಣ ಸಂಗ್ರಹಿಸಿ ಕೊಟ್ಟರು. ಆದರೆ ಜನಪ್ರತಿನಿಧಿಗಳಿಂದ ಏನು ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಿನಕ್ಕೆ 700 ಕಾಲ್ ಬರುತ್ತವಂತೆ : ಪ್ರಭಾವಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ವಿರುದ್ಧ ಗೆಲುವು ಸಾಧಿಸಿದ ಶಾಸಕ ಪ್ರದೀಪ್ ಈಶ್ವರ್, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹವಾ ಸೃಷ್ಟಿಸಿಕೊಂಡಿದ್ದಾರೆ. ಅವರೇ ಕಾರ್ಯಕ್ರಮದಲ್ಲಿ ಹೇಳಿಕೊಂಡಂತೆ ದಿನಕ್ಕೆ 700 ಫೋನ್ ಕಾಲ್ ಬರುತ್ತವೆ. ಕ್ಷೇತ್ರದವರಲ್ಲದೇ ಹೊರಗಿನವರು ಸಾಕಷ್ಟು ಸಂಖ್ಯೆಯಲ್ಲಿ ಫೋನ್ ಮಾಡುತ್ತಿದ್ದಾರೆಂದು ಸಭೆಯೊಂದರಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ನೀಡುವ ಆಶ್ವಾಸನೆಗಳು, ಭರವಸೆಗಳು ಈಗ ಹೊರ ಜಿಲ್ಲೆಗಳ ನಾಗರಿಕರ ಗಮನ ಸೆಳೆಯುತ್ತಿವೆ ಎನ್ನುವುದ್ದಕ್ಕೆ ಕಲುಬುರಗಿಯ ಕಮಲಾಬಾಯಿ ಅವರ ಕಥೆ ಸಾಕ್ಷಿಯಾಗಿದೆ.