ಮೈಸೂರಿನ ಕೆಆರ್​ಎಸ್ ಹಿನ್ನೀರಿನ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೊಮ್ಮಗನೇ ಅಜ್ಜಿಯನ್ನು ಕೊಂದಿರುವ ಸಂಗತಿ ಬೆಳಕಿಗೆ ಬಂದಿದೆ.

ಮೈಸೂರು: ಅಜ್ಜಿಯ ಬೈಗುಳ ಸಹಿಸಿಕೊಳ್ಳಲಾಗದೆ ಮೊಮ್ಮಗನೇ ಅಜ್ಜಿಯನ್ನು ಕೊಲೆಗೈದು ಶವಕ್ಕೆ ಬೆಂಕಿ ಹಚ್ಚಿದ್ದ ಮೊಮ್ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಗಾಯತ್ರಿಪುರಂ ನಿವಾಸಿ ಸುಪ್ರೀತ್‌ (23) ಕೊಲೆ ಮಾಡಿದ ಯುವಕ. ಈತ ತನ್ನ ಅಜ್ಜಿ ಸುಲೋಚನಾ (75) ಎಂಬವರನ್ನು ಕೊಲೆಗೈದು, ಶವವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಸುತ್ತಿ ರಟ್ಟಿನ ಡಬ್ಬಕ್ಕೆ ಹಾಕಿ ಕಾರಿನಲ್ಲಿ ಮೈಸೂರು ತಾಲೂಕು ಸಾಗರಕಟ್ಟೆ ಗ್ರಾಮದ ಬಳಿಯ ಕೆಆರ್‌ಎಸ್‌ ಹಿನ್ನೀರಿನ ಪ್ರದೇಶಕ್ಕೆ ತಂದು ಸುಟ್ಟಿದ್ದ. ಇತ್ತೀಚೆಗೆ ಅರೆಬೆಂದ ಸ್ಥಿತಿಯಲ್ಲಿ ವೃದ್ಧೆಯೊಬ್ಬರು ಶವ ಪತ್ತೆಯಾದ ಬಗ್ಗೆ ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಬೆನ್ನತ್ತಿದ ಇಲವಾಲ ಪೊಲೀಸ್‌ ಠಾಣೆ ಇನ್ಸ್​ಪೆಕ್ಟರ್ ಜಿ.ಎಸ್‌. ಸ್ವರ್ಣ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಗಾಗ ಬೈಯುತ್ತಿದ್ದ ಅಜ್ಜಿಯನ್ನು ಆರೋಪಿ ಸುಪ್ರೀತ್‌ ತಳ್ಳಿದ್ದ. ತಳ್ಳಿದ ರಭಸಕ್ಕೆ ಅಜ್ಜಿ ಬಿದ್ದು ಗಾಯಗೊಂಡಿದ್ದಳು. ಆ ವೇಳೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ, ಮೃತಹೇದವನ್ನು ಕೆಆರ್‌ಎಸ್‌ ಹಿನ್ನೀರಿನಲ್ಲಿ ತಂದು ಸುಟ್ಟುಹಾಕಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ತನಿಖಾ ತಂಡದಲ್ಲಿ ಇನ್‌ಸ್ಪೆಕ್ಟರ್‌ ಜಿ.ಎಸ್‌. ಸ್ವರ್ಣ, ಎಸ್‌ಐ ಸುರೇಶ್‌ ಬೋಪಣ್ಣ, ಸಿಬ್ಬಂದಿ ರವಿಕುಮಾರ್‌, ಧರ್ಮ, ಸಿದ್ದವೀರಪ್ಪ, ಪ್ರಕಾಶ್‌, ಜಗದೀಶ್‌ ಶೆಟ್ಟಿ, ಆನಂದ್‌, ಮನೋಹರ್‌, ಅರುಣೇಶ್‌, ಮಂಜುನಾಥ್‌ ಹಾಗೂ ನಿಂಗರಾಜಗೌಡ ಇದ್ದರು. ಪೊಲೀಸರ ಈ ಕಾರ್ಯವನ್ನು ಎಸ್ಪಿ ಸೀಮಾ ಲಾಟ್ಕರ್‌ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *