ರಾಜ್ಯದಲ್ಲಿ ಬರಗಾಲ ಇರಲಿದೆ. ಅಲ್ಲದೇ ಮಹಿಳೆಯಿಂದ ರಾಜ್ಯ ರಾಜಕೀಯದಲ್ಲಿ ಏರುಪೇರು ಉಂಟಾಗಲಿದೆ ಎಂದು ಹಾವೇರಿಯ ಖ್ಯಾತ ಸುಕ್ಷೇತ್ರ ದೇವರಗುಡ್ಡದಲ್ಲಿ ಗೊರವಯ್ಯ ದಸರಾ ವಾರ್ಷಿಕ ಭವಿಷ್ಯ ನುಡಿದಿದ್ದಾರೆ.
ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ವಾಡಿಕೆಯಂತೆ ನುಡಿಯುವ ಭವಿಷ್ಯದಲ್ಲಿ ಈ ಬಾರಿ ಕಂಬವೇರಿದ ಗೊರವಯ್ಯಾ, ‘ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’ ಅಂತ ಹೇಳಿದ್ದಾರೆ.
ಗೊರವಯ್ಯಾ ಭವಿಷ್ಯವನ್ನು ರಾಜ್ಯದ ಪರಿಸ್ಥಿತಿಗೆ ಹೋಲಿಸಿದರೆ ಬರಗಾಲ ಕಾಡಲಿದೆ ಎಂದು ಆಗಿದ್ದು, ರಾಜಕೀಯವಾಗಿ ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರು ಆಗಲಿದೆ ಎಂಬ ಭವಿಷ್ಯವಾಣಿ ಬಂದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕ ಇಂದು ಪ್ರತಿ ವರ್ಷದಂತೆ ನಡೆಯಿತು. ಈ ಕಾರ್ಣಿಕೋತ್ಸವದಲ್ಲಿ 9 ದಿನಗಳ ಕಾಲ ಉಪವಾಸವಿದ್ದಂತ ನಾಗಪ್ಪಜ್ಜ ಉರ್ಮಿ ಗೊರವಯ್ಯ ಅವರು ಕಾರ್ಣಿಕ ನುಡಿಯನ್ನು ನುಡಿದಿದ್ದಾರೆ.
ಗೊರವಯ್ಯ ನುಡಿದಂತ ಕಾರ್ಣಿಕ ನುಡಿಯನ್ನು ದೇಗುಲದ ಪ್ರಧಾನ ಅರ್ಚಕ ಸಂತೋಷ್ ಭಟ್ ವಿಶ್ಲೇಷಿಸಿದ್ದು, ಮುಕ್ಕೋಟಿ ಚಲ್ಲಿತಲೇ ಅಂದರೆ ರೈತರು ಕೋಟ್ಯಂತರ ರೂ. ಭೂಮಿಗೆ ಹಾಕುತ್ತಾರೆ. ರೈತರಿಗೆ ಲಾಭವಾಗುವ ನಿರೀಕ್ಷೆಗಳು ಕಡಿಮೆ. ಕಲ್ಯಾಣಿ ಕಕ್ಕಿತಲೆ ಅಂದರೆ ರಾಜ್ಯ ಸರ್ಕಾರಕ್ಕೆ ಆಪತ್ತು ಬರುವ ಸಾಧ್ಯತೆ. ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರಾಗುವ ಸಾಧ್ಯತೆ ಎಂದು ವಿಶ್ಲೇಷಿಸಿದ್ದಾರೆ.
ಪ್ರತಿ ವರ್ಷ ದಸರಾ ಹಬ್ಬದ ಆಯುಧ ಪೂಜೆಯಂದು ದೇವರಗುಡ್ಡದಲ್ಲಿ ಕಾರ್ಣಿಕ ನುಡಿಯಲಾಗುತ್ತದೆ. ಒಂಬತ್ತು ದಿನ ಉಪವಾಸವಿದ್ದು ಗೊರವಯ್ಯಾ ಕಾರ್ಣಿಕ ನುಡಿಯುತ್ತಾರೆ. ಈ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗುತ್ತಾರೆ.
ಇಂತಹ ಸಂದರ್ಭದಲ್ಲಿ ಬಿಲ್ಲನ್ನೇರಿ ಪ್ರಸಕ್ತ ವರ್ಷದ ಕಾರ್ಣಿಕವನ್ನು ಗೊರವಪ್ಪ ನುಡಿದಿದ್ದಾರೆ. ಅದೇ ‘ಮುಕ್ಕೋಟಿ ಚೆಲ್ಲಿತಲೇ ಕಲ್ಯಾಣ ಕಟ್ಟಿತಲೇ ಪರಾಕ್’ ಅಂತ ಆಗಿದೆ. ಅಂದರೇ ಒಂದು ಹೆಣ್ಣಿನ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ಏರುಪೇರಾಗುವ ಸಾಧ್ಯತೆಯಿದೆ ಎಂದಾಗಿದೆ.