ಅಪ್ರಾಪ್ತ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮಂಗಳೂರಿನ ಪೋಸ್ಕೋ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಪೊಲೀಸರ ಪ್ರಕಾರ, ಆರೋಪಿಯು ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದನು.

ಮಂಗಳೂರು: ಅಪ್ರಾಪ್ತ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿದ್ದ ಆರೋಪಿಗೆ ಪೋಸ್ಕೋ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಸಂತ್ರಸ್ತೆಯ ಚಿಕ್ಕಮ್ಮ ನೀಡಿದ ದೂರಿನ ಮೇರೆಗೆ ಕಳೆದ ವರ್ಷ ಅಪರಾಧಿ ಅಶ್ವಥ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಪೊಲೀಸರ ಪ್ರಕಾರ, ಅಶ್ವಥ್ ಮಲ್ಲಿಕಾ ಅಲಿಯಾಸ್ ರಾಜೀವಿಯ ಎರಡನೇ ಪತಿಯಾಗಿದ್ದಾನೆ. ಮಲ್ಲಿಕಾಗೆ ಮೊದಲ ಪತಿಯಿಂದ ಹೆಣ್ಣು ಮಗು ಜನಿಸಿತ್ತು. ಆದರೆ ಅಶ್ವಥ್, 2022 ಜುಲೈ 26 ರಂದು ಮುಂಜಾನೆ 3.30 ರ ಸುಮಾರಿಗೆ ಅಪ್ರಾಪ್ತ ಮಲ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅಲ್ಲದೆ, ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು.

ವಿಚಾರವನ್ನು ಸಂತ್ರಸ್ತೆಯು ತನ್ನ ಚಿಕ್ಕಮ್ಮನ ಬಳಿ ಹೇಳಿಕೊಂಡಿದ್ದಾಳೆ. ಕೂಡಲೇ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಅದರಂತೆ ಪೊಲೀಸರು, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಮತ್ತು 506 (ಅಪರಾಧ ಬೆದರಿಕೆ) ಮತ್ತು ಸೆಕ್ಷನ್ 6 (ಲೈಂಗಿಕ ದೌರ್ಜನ್ಯ) ರಕ್ಷಣೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ನಂತರ ಪೊಲೀಸರು ಸಂತ್ರಸ್ತೆ ಮತ್ತು ಆರೋಪಿಯ ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಪೂರ್ಣಗೊಳಿಸಿ ಪೋಕ್ಸೋ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ಅಂತಿಮ ತೀರ್ಪು ಪ್ರಕಟಿಸಿದ ಜಿಲ್ಲಾ ಮತ್ತು ಸೆಷನ್ಸ್ FTSC II (POCSO) ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಘೋಷಿಸಿ 20 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.

Leave a Reply

Your email address will not be published. Required fields are marked *