ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳೊಂದಿಗೆ ರೌಂಡ್ಸ್ ಹೊಡೆದು ಶಕ್ತಿ ಯೋಜನೆಯ ಲಾಭದ ಬಗ್ಗೆ ಮಹಿಳಾ ಪ್ರಯಾನಿಕರಿಂದ ಮಾಹಿತಿ ಪಡೆದರು.

ಬೆಳಗಾವಿ: ಸಾರಿಗೆ ಸಚಿವ (Ramalinga Reddy) ಅವರು ಕೇಂದ್ರ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ನಿಲ್ದಾಣದಲ್ಲಿ ಅಧಿಕಾರಿಗಳ ಜೊತೆ ರೌಂಡ್ಸ್ ಹೊಡೆದ ಸಾರಿಗೆ ಸಚಿವರು, ಮಹಿಳಾ ಪ್ರಯಾಣಿಕರ ಜೊತೆ ಮಾತುಕತೆ ನಡೆಸಿ ಶಕ್ತಿ ಯೋಜನೆ (Shakti Scheme) ಲಾಭದ ಬಗ್ಗೆ ವಿಚಾರಿಸಿದರು. ಈ ವೇಳೆ ಮಹಿಳಾ ಮಣಿಗಳು ಸಂತಸ ಹಂಚಿಕೊಂಡರು.

ಅಧಿಕಾರಿಗಳ ಜೊತೆ ಮಹಿಳಾ ಪ್ರಯಾಣಿಕರನ್ನು ಭೇಟಿಯಾದ ಸಚಿವರು, ಏನಮ್ಮಾ ಖುಷಿಯಾಗಿದೀರಾ ಎಂದು ಕೇಳಿದ್ದಾರೆ. ಇದಕ್ಕೆ ಮಹಿಳೆಯರು ಚೆನ್ನಾಗಿದೀವಿ ಸರ್ ಎಂದು ಹೇಳಿದ್ದಾರೆ. ಇದೇ ವೇಳೆ ಶಕ್ತಿ ಯೋಜನೆ ಬಗ್ಗೆ ಮಾಹಿತಿ ಪಡೆಯಲು ಮುಂದಾದ ಸಚಿವರು, ಶಕ್ತಿ ಯೋಜನೆಯಿಂದ ಲಾಭವಾಗಿದೆಯೇ ಎಂದು ಕೇಳಿದ್ದಾರೆ. ಈ ಯೋಜನೆಯಿಂದ ಲಾಭವಾಗಿದೆ ಎಂದು ಮಹಿಳಾ ಪ್ರಯಾಣಿಕರು ಸಂತಸ ಹಂಚಿಕೊಂದರು.

ಬಳಿಕ ಸಾರಿಗೆ ಕಂಡಕ್ಟರ್ ಹಾಗೂ ಡ್ರೈವರ್​ಗಳ ಜೊತೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ದಿನನಿತ್ಯದ ಮಾಹಿತಿ ಪಡೆದರು. ನಂತರ ಬಸ್ ನಿಲ್ದಾಣದಲ್ಲಿರುವ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಮಾಹಿತಿ ಪಡೆದರು. ಸಾರಿಗೆ ಸಚಿವರ ಜೊತೆ ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್, ಎನ್‌ಡಬ್ಲ್ಯೂಕೆಆರ್‌ಟಿಸಿ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ್ ರಾಠೋಡ್ ಸೇರಿ ಹಲವರು ಇದ್ದರು.

ನಿನ್ನೆ (ಜೂನ್ 24) ವಿವಿಧ ಸಾರಿಗೆ ಇಲಾಖೆಗಳ ಎಂಡಿಗಳ ಜೊತೆ ಸಭೆ ನಡೆಸಿದ್ದ ಸಾರಿಗೆ ಸಚಿವರು, ಶಕ್ತಿ ಯೋಜನೆಯ ಬಗ್ಗೆ ಮಾಹಿತಿ ಪಡೆದಿದ್ದರು. ನಂತರ ಮಾತನಾಡಿದ್ದ ಅವರು, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಮಾಡಿದ ನಂತರ ಸರ್ಕಾರಿ ಬಸ್​ಗಳನ್ನು ಪ್ರಯಾಣಿಸುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದರು. ಶಕ್ತಿ ಯೋಜನೆ ಜಾರಿಗೂ ಮೊದಲು 84.15 ಲಕ್ಷ ಜನರ ಪ್ರಯಾಣ ಮಾಡುತ್ತಿದ್ದರು. ಜೂನ್ 24 ರಂದು ಒಂದೇ ದಿನ 1.05 ಕೋಟಿ ಜನ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *