2023 ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಕಿಡ್ನಾಪ್​ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯ್ ಕುಮಾರ್, ಉದಯ್ ಎಂಬುವರ ದೂರು ಆಧರಿಸಿ ನಗರದ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ಬೆಂಗಳೂರು: 2023 ರ ಸಾರ್ವತ್ರಿಕ ಚುನಾವಣೆ ವೇಳೆ ಕಾಂಗ್ರೆಸ್ (Congress) ಕಾರ್ಯಕರ್ತರ ಕಿಡ್ನಾಪ್​ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವಿಜಯ್ ಕುಮಾರ್, ಉದಯ್ ಎಂಬುವರ ದೂರು ಆಧರಿಸಿ ನಗರದ ಯಶವಂತಪುರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಕಾಂಗ್ರೆಸ್​ ಪರ ಕೆಲಸ ಮಾಡದಂತೆ ರೌಡಿಶೀಟರ್ಸ್ ಮನೋಜ್, ಕೆಂಚನ ಗ್ಯಾಂಗ್​​ನಿಂದ ಕಿಡ್ನಾಪ್​​ ಮಾಡಿ ಲಾಡ್ಜ್​​ನಲ್ಲಿ ಕೂಡಿ ಹಾಕಿದ್ದ ಆರೋಪ ಮಾಡಲಾಗಿತ್ತು.

ಮೇ 9ರಂದು ಯಶವಂತಪುರ ವೃತ್ತ ಬಳಿ ಕಿಡ್ನಾಪ್ ಮಾಡಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡದಂತೆ ಒತ್ತಡ ಹಾಕಿದ್ದರು. ಒಂದು ವೇಳೆ ಕಾಂಗ್ರೆಸ್​​​ ಪರ ಕೆಲಸ ಮಾಡದಿದ್ದರೆ ಹಣ ಕೊಡುವುದಾಗಿ ಆಮಿಷ ಒಡಿದ್ದರು. ಒಪ್ಪದಿದ್ದಕ್ಕೆ ನಮ್ಮ ಫೋನ್​ ಕಿತ್ತುಕೊಂಡು ಮತ್ತಿಕೆರೆ ಲಾಡ್ಜ್​​ನಲ್ಲಿ ಕೂಡಿ ಹಾಕಿದ್ದರೆಂದು ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ.

ಎಲೆಕ್ಷನ್ ದಿನ ನಮ್ಮನ್ನು ಹೊರಗಡೆ ಹೋಗದಂತೆ ಲಾಡ್ಜ್‌ನಲ್ಲಿಯೇ ಕೂಡಿ ಹಾಕಿದ್ದರು, ನಮ್ಮನ್ನು ಬೈಕ್​ನಲ್ಲಿ ಕರೆದುಕೊಂಡು ಬಂದ ಹುಡುಗರ ಪೈಕಿ ಇಬ್ಬರು ಹುಡುಗರು ನಮ್ಮೊಂದಿಗೆ ಬೆಳಗ್ಗೆಯಿಂದ ಸಂಜೆಯವರೆಗೂ ಅಕ್ರಮವಾಗಿ ಲಾಡ್ಜ್‌ನಲ್ಲಿ ಇರಿಸಿಕೊಂಡಿದ್ದರು. ನಾವು ಬರುವಾಗ ನಮ್ಮ ಮೊಬೈಲ್‌ಗಳನ್ನು ನಮಗೆ ವಾಪಸ್ಸು ಕೊಟ್ಟು ಕಳುಹಿಸಿಕೊಟ್ಟರು. ಇವರು ಯಾರು ಸಹ ನಮಗೆ ಹೊಡೆಯುವುದು, ಕೆಟ್ಟದಾಗಿ ಬೈಯ್ಯುವುದು ಮಾಡಲಿಲ್ಲ.

ನಂತರ ತುಮಕೂರು ಸಿಟಿ ಶ್ರೀರಾಂನಗರದಲ್ಲಿರುವ ನನ್ನ ಅಕ್ಕನ ಮನೆಯಲ್ಲಿ ಹಬ್ಬ ಇದ್ದ ಕಾರಣ ಠಾಣೆಗೆ ಬಂದು ದೂರು ಕೊಡಲು ಸಾಧ್ಯವಾಗಿರಲಿಲ್ಲ. ಈ ದಿನ ಸ್ನೇಹಿತರು ಧೈರ್ಯ ಹೇಳಿದ್ದರಿಂದ ಠಾಣೆಗೆ ಒಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ನನ್ನನ್ನು ಮತ್ತು ಉದಯ್ ಚುನಾವಣೆ ದಿನ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಬಾರದೆಂದು ಕರೆದುಕೊಂಡು ಹೋಗಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ಮನೋಜ್, ಕೆಂಚ ಮತ್ತು ಇತರೆ 3-4 ಜನ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್​ ಕಾರ್ಯಕರ್ತರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *