Street Vendors: ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್, ನಮಸ್ತೆ ಚಿಕ್ಕಬಳ್ಳಾಪುರ ಹೆಸರಲ್ಲಿ ನಗರದ ಬೀದಿ ಬದಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೀದಿ ಬದಿ ವ್ಯಾಪಾರಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು, ಇನ್ಮುಂದೆ ಬೀದಿ ವ್ಯಾಪಾರಿಗಳ ಸುಂಕದ ಹಣವನ್ನು ನಾನು ಕಟ್ಟುತ್ತೇನೆ ಎಂದು ಭರವಸೆ ನೀಡುವುದರ ಜೊತೆಗೆ ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲುಸುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್

ಹೈಲೈಟ್ಸ್‌:

  • ನಮಸ್ತೆ ಚಿಕ್ಕಬಳ್ಳಾಪುರ ಹೆಸರಲ್ಲಿ ಶಾಸಕರಿಂದ ನಗರದ ಬೀದಿ ಬದಿ ಅಂಗಡಿಗಳಿಗೆ ಭೇಟಿ.
  • ಬೀದಿ ಬದಿ ವ್ಯಾಪಾರಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ.
  • ಬೀದಿ ವ್ಯಾಪಾರಿಗಳ ಸುಂಕ ನಾನು ಕಟ್ಟುತ್ತೇನೆಂದ ಶಾಸಕ ಪ್ರದೀಪ್ ಈಶ್ವರ್.

ಚಿಕ್ಕಬಳ್ಳಾಪುರ: ನಗರಕ್ಕೆ ಬೀದಿ ಬದಿ ವ್ಯಾಪಾರಿಗಳು ಉಸಿರು ಇದ್ದಂತೆ. ಸಾವಿರಾರು ಕುಟುಂಬಗಳು ಇದೇ ವ್ಯಾಪಾರ ನಂಬಿವೆ. ಹೀಗಾಗಿ ಎಷ್ಟೇ ಲಕ್ಷಗಳಾದರೂ ಪರವಾಗಿಲ್ಲ. ಅಷ್ಟೂ ಸುಂಕವನ್ನು ನಾನು ಪಾವತಿಸುತ್ತೇನೆ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

ನಮಸ್ತೆ ಚಿಕ್ಕಬಳ್ಳಾಪುರ’ ಹೆಸರಲ್ಲಿ ಬೆಳ್ಳಂಬೆಳಗ್ಗೆ ನಗರದ ಬೀದಿ ಬದಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ. ಹಿಂದಿನ ಶಾಸಕರು ಬೀದಿ ಬದಿ ವ್ಯಾಪಾರಿಗಳ ಸುಂಕ ಕಟ್ಟುತ್ತಿದ್ದರು ಎಂಬುದು ಒಳ್ಳೆಯ ವಿಷಯ. ಆ ಸುಂಕದ ಹಣವನ್ನು ನಾನು ಇನ್ಮುಂದೆ ಕಟ್ಟುತ್ತೇನೆ ಎಂದು ಭರವಸೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಗರದ ಪ್ರಮುಖ ಎಂಜಿ ರಸ್ತೆಯನ್ನು ವಿಸ್ತರಣೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಆ ಕಡೆ 50, ಈ ಕಡೆ 50 ಅಡಿ ರಸ್ತೆ ಮಾಡುವುದಾಗಿ ಹೇಳಿದ್ದಾರೆ. ಅಷ್ಟು ಬಿಡಲು ಸಾಧ್ಯವಿಲ್ಲಎಂದು ಹೇಳಿದ್ದೇನೆ. ಆದರೆ ಕೇಂದ್ರ ಸರಕಾರದ ಕಾಮಗಾರಿಯಾಗಿರುವುದರಿಂದ ನಾವು ಹೆಚ್ಚಿನದ್ದನ್ನು ಹೇಳಲು ಬರುವುದಿಲ್ಲ. ನೋಡೋಣ ರಸ್ತೆ ಆಗಲಿ ಆನಂತರ ಬೀದಿ ಬದಿ ವ್ಯಾಪಾರಿಗಳ ರಕ್ಷಣೆಗೆ ಏನು ಬೇಕೋ ಆ ಕೆಲಸವನ್ನು ನಾನು ಮಾಡುತ್ತೇನೆ ಎಂದರು.

ಪ್ರತ್ಯೇಕವಾಗಿ ಅಂಗಡಿಗಳನ್ನು ನಿರ್ಮಿಸಿ ಇಲ್ಲಿನ ಬೀದಿ ಬದಿ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಬಗ್ಗೆ ಯೋಚಿಸಲಾಗುವುದು. ನಗರದಲ್ಲಿ ಗಂಗಮ್ಮನಗುಡಿ, ಬಜಾರ್‌ ರಸ್ತೆಗಳ ವಿಸ್ತರಣೆಗೆ ನಾನು ಬಿಡಲ್ಲ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ನಾವು ಹಸ್ತಕ್ಷೇಪ ಮಾಡಲು ಬರಲ್ಲ. ಆದರೆ ಬೀದಿ ಬದಿ ವ್ಯಾಪಾರಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲುಸುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ದಂಡ ವಿಧಿಸಿದರೆ ಯಾರೂ ಆ ಜಾಗಗಳಲ್ಲಿ ವಾಹನಗಳನ್ನು ನಿಲ್ಲಿಸಲ್ಲ. ಶಿಸ್ತನ್ನು ಹೇಗೆ ಜಾರಿಗೆ ತರಬೇಕೆಂಬುದು ನನಗೆ ಗೊತ್ತಿದೆ, ಅದನ್ನು ಅನುಷ್ಠಾನಕ್ಕೆ ತರುತ್ತೇನೆ. ಇದಿಷ್ಟೇ ಅಲ್ಲ, ನಗರಸಭೆಗೆ ಆದಾಯ ಬರುವಂತೆ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಹಂತ ಹಂತವಾಗಿ ಆ ಎಲ್ಲ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಹಾಜರಾತಿ ಇಲ್ಲದಿದ್ದರೆ ಪರೀಕ್ಷೆಗಿಲ್ಲಅವಕಾಶ
ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಲು ಸರಕಾರ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಹೀಗಾಗಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ಹಾಜರಾತಿ ಪಕ್ಕಾ ಇರಬೇಕು. ಹಾಜರಾತಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂರಲು ಅವಕಾಶ ನೀಡುವುದಿಲ್ಲಎಂದು ಶಾಸಕ ಪ್ರದೀಪ್‌ ಈಶ್ವರ್‌ ಎಚ್ಚರಿಸಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಕಂಪ್ಯೂಟರ್‌ ಲ್ಯಾಬ್‌ ಉದ್ಘಾಟಿಸಿ, ಮಾತನಾಡಿದ ಅವರು, ಪ್ರಾಧ್ಯಾಪಕರು ಸರಿಯಾದ ಸಮಯಕ್ಕೆ ಕಾಲೇಜಿಗೆ ಬಂದು ಉತ್ತಮ ಬೋಧನೆ ಮಾಡಬೇಕು. ವಿದ್ಯಾರ್ಥಿಗಳೂ ಕೂಡಾ ತಪ್ಪದೇ ಕಾಲೇಜಿಗೆ ಹಾಜರಾಗಬೇಕು. ಇಲ್ಲವಾದಲ್ಲಿಅವರಿಗೆ ಪರೀಕ್ಷೆಗೆ ಕೂರಲು ಅವಕಾಶ ನೀಡುವುದಿಲ್ಲಎಂದು ಹೇಳಿದರು.

ಸಾವಿರ ರೂ. ವಿದ್ಯಾರ್ಥಿವೇತನ: ಸರಕಾರಿ ಪದವಿ ಕಾಲೇಜಿನಲ್ಲಿ2300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರಿಗೂ ತಲಾ 1 ಸಾವಿರ ರೂ. ವಿದ್ಯಾರ್ಥಿ ವೇತನ ನೀಡುತ್ತೇನೆ. ಚೆಕ್‌ ಕೊಡಲ್ಲನಗದನ್ನೇ ಕೊಡುತ್ತೇನೆ. ಈ ಹಣವನ್ನು ಕೆಲವರು ದುರುಪಯೋಗಪಡಿಸಿಕೊಳ್ಳಬಹುದು. ಆದರೆ ಸಾಕಷ್ಟು ಮಂದಿ ಇದರ ಲಾಭ ಪಡೆದು ತಮ್ಮ ಮುಂದಿನ ವ್ಯಾಸಂಗಕ್ಕೆ ಬಳಸಿಕೊಳ್ಳುವ ಆಶಾಭಾವ ಇದೆ ಎಂದರು.

ಸರಕಾರಿ ಪದವಿ ಕಾಲೇಜಿನ ಎಲ್ಲಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರ ಬಳಿ ಚರ್ಚಿಸಿ ಎಲ್ಲಸೌಲಭ್ಯಗಳನ್ನು ಕಲ್ಪಿಸುತ್ತೇನೆ. ಆದರೆ ಯಾವುದೇ ಖಾಸಗಿ ಶಾಲೆಗೆ ಕಮ್ಮಿಯಿಲ್ಲದಂತೆ ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜು ನಡೆಯಬೇಕು. ಖಾಸಗಿ ಕಾಲೇಜುಗಳಲ್ಲಿನಡೆಯುವ ಎಲ್ಲಕಾರ್ಯಕ್ರಮಗಳೂ ಇಲ್ಲೂನಡೆಯಬೇಕು ಎಂದು ತಿಳಿಸಿದರು.

15 ದಿನದಲ್ಲಿಕೋಚಿಂಗ್‌ ಕೇಂದ್ರ
ಅದೇ ರೀತಿ ಇನ್ನು 15 ದಿನದಲ್ಲಿಐಎಎಸ್‌, ಕೆಎಎಸ್‌ ಕೋಚಿಂಗ್‌ ಕೇಂದ್ರವನ್ನು ಪ್ರಾರಂಭ ಮಾಡುತ್ತೇನೆ. ಇದರಲ್ಲಿಸರಕಾರಿ ಕಾಲೇಜಿನಲ್ಲಿಓದಿದವರಿಗೆ ಮೊದಲ ಆದ್ಯತೆ ನೀಡುತ್ತೇವೆ. ನಂತರ ಖಾಸಗಿ ಶಾಲೆಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತೇವೆ. 500 ಮಕ್ಕಳಿಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು. ದೇಶದ ಪ್ರತಿಷ್ಠಿತ ಸಂಸ್ಥೆಗಳ ತಜ್ಞರನ್ನು ಕರೆಸಿ ತರಬೇತಿ ಕೊಡಿಸುತ್ತೇನೆ. ಶನಿವಾರ ಮಧ್ಯಾಹ್ನ ಹಾಗೂ ಭಾನುವಾರ ಪೂರ್ತಿ ದಿನ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಭವಿಷ್ಯವನ್ನು ರೂಪಿಸಿಕೊಳ್ಳಿ
ಕಾಲೇಜಿನ ಬಿಸಿಎ ವಿಭಾಗದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಪ್ರದೀಪ್‌ ಈಶ್ವರ್‌ ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ. ಆದರೆ ಸರಕಾರವೇ ಲಕ್ಷಾಂತರ ರೂ. ಖರ್ಚು ಮಾಡಿ ನಿಮಗೆ ಶಿಕ್ಷಣ ಕೊಡುತ್ತಿದೆ. ಇದನ್ನು ಎಲ್ಲರೂ ಸಮರ್ಥವಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಕಾಲೇಜು ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಚೆನ್ನಾಗಿ ವ್ಯಾಸಂಗ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.

60 ವಿದ್ಯಾರ್ಥಿಗಳನ್ನು ಬೆಂಗಳೂರಲ್ಲಿಓದಿಸುವೆ
ಎಸ್ಸೆಸ್ಸೆಲ್ಸಿಯ ಆಯ್ದ 60 ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿಉಳಿದುಕೊಳ್ಳುವ ವ್ಯವಸ್ಥೆ ಮಾಡಿ ಓದಿಸುತ್ತೇನೆ. ಈ ಬಾರಿ ಸರಕಾರಿ ಶಾಲೆಯ ಮಕ್ಕಳೂ ಶೇ.100ರಷ್ಟು ಅಂಕಗಳಿಸುವ ಸಾಧನೆ ಮಾಡಬೇಕು. ಅದೇ ರೀತಿ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಸಾಧನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವೆಬ್‌ಸೈಟ್‌ ಲಾಂಚ್‌

ನಿಮ್ಮ ಸಮಸ್ಯೆಗಳು ಎಂಎಲ್‌ಎಗೆ ಹೇಳೋದು ಹೇಗೆ ಎಂದರೆ, ಮುಂದಿನ ದಿನಗಳಲ್ಲಿಪ್ರದೀಪ್‌ ಈಶ್ವರ್‌ ಎಂಎಲ್‌ಎ ವೆಬ್‌ಸೈಟ್‌ ಲಾಂಚ್‌ ಆಗುತ್ತದೆ. ಅದರಲ್ಲಿಲಾಗಿನ್‌ ಆಗಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ಕಳಿಸಿ, ನಾನು ಶೀಘ್ರವಾಗಿ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇನೆ. ಪರಿಹರಿಸದಿದ್ದರೆ ಯಾಕೆ ಪರಿಹರಿಸಲು ಆಗಲಿಲ್ಲಎಂದು ಉತ್ತರ ನೀಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲ ಮುನಿರಾಜು, ಕಾಲೇಜು ಅಭಿವೃದ್ಧಿ ಸಮಿತಿಯ ಕೆ.ಎಲ್‌ ಶ್ರೀನಿವಾಸ್‌, ಪ್ರಾದ್ಯಾಪಕ ಶಫಿ ಅಹಮದ್‌ ಹಾಗೂ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *