ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಹೊಸಕೋಟೆ ಡಿಪೋ ಪ್ರಯಾಣಿಕರಿಂದ 2,000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸದಂತೆ ಆದೇಶ ಹೊರಡಿಸಿದ ನಂತರ, ಬಿಎಂಟಿಸಿ ಕೇಂದ್ರ ಕಚೇರಿ ಸಿಬ್ಬಂದಿಗೆ ಅಂತಹ ಯಾವುದೇ ಆದೇಶಗಳನ್ನು ನೀಡಿಲ್ಲ ಎಂದು ನಿಗಮವು ಭಾನುವಾರ ಸ್ಪಷ್ಟಪಡಿಸಿದೆ.

ಇನ್ನು ಬಿಎಂಟಿಸಿ, ‘ಕೆಲವು ಗೊಂದಲಗಳಿಂದ ಹೊಸಕೋಟೆ ಡಿಪೋ 2,000 ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳದಂತೆ ಆದೇಶ ಹೊರಡಿಸಿದೆ. ಆದರೆ, ಈ ಆದೇಶವನ್ನು ಹಿಂಪಡೆಯಲಾಗಿದೆ. ಬಿಎಂಟಿಸಿ ಬಸ್‌ಗಳು 2,000 ರೂ. ನೋಟುಗಳನ್ನು ಸ್ವೀಕರಿಸುತ್ತಿವೆ ಎಂದು ತಿಳಿಸಿದೆ.

ಪ್ರಯಾಣಿಕರಿಂದ 2 ಸಾವಿರ ಮುಖಬೆಲೆಯ ನೋಟುಗಳನ್ನು ಪಡೆಯಬಾರದು ಎಂದು ಆದೇಶ ಹೊರಡಿಸಲಾಗಿತ್ತು. ಆದರೆ, ಈ ಬಗ್ಗೆ ಬಿಎಂಟಿಸಿ ಕೇಂದ್ರ ಕಚೇರಿಯಿಂದ ಯಾವುದೇ ಆದೇಶ ಇಲ್ಲದಿರುವುದರಿಂದ, ಈ ಆದೇಶವನ್ನು ಹಿಂಪಡೆಯಲಾಗಿದೆ. ಇನ್ಮುಂದೆ ಸಂಸ್ಥೆಯ ಎಲ್ಲಾ ಸಿಬ್ಬಂದಿಯು 2 ಸಾವಿರ ಮುಖಬೆಲೆಯ ನೋಟುಗಳನ್ನು ಪ್ರಯಾಣಿಕರಿಂದ ಸ್ವೀಕರಿಸಬೇಕೆಂದು ಸೂಚಿಸಲಾಗುತ್ತಿದೆ ಎಂದು ಬಿಎಂಟಿಸಿ ಸುತ್ತೋಲೆಯಲ್ಲಿ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೇ 19 ರಂದು ತನ್ನ ‘ಕ್ಲೀನ್ ನೋಟ್ ನೀತಿ’ಗೆ ಅನುಗುಣವಾಗಿ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಅಂತಹ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಒಂದು ಬಾರಿಗೆ ₹ 20,000 ವರೆಗೆ ಸೆಪ್ಟೆಂಬರ್ 30 ರೊಳಗೆ ನೋಟುಗಳ ವಿನಿಮಯ ಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ನೀಡಿದೆ.

ಭಾನುವಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಹ ಪತ್ರಿಕಾ ಹೇಳಿಕೆಯನ್ನು ನೀಡಿದ್ದು, ನಿಗಮದ ಬಸ್‌ಗಳು ಪ್ರಯಾಣಿಕರಿಂದ 2,000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವುದನ್ನು ಮುಂದುವರಿಸುತ್ತವೆ ಎಂದು ಸ್ಪಷ್ಟಪಡಿಸಿದೆ. ‘ದಯವಿಟ್ಟು ಗಮನಿಸಿ, ಕೆಎಸ್‌ಆರ್‌ಟಿಸಿ 2000 ರೂ. ನೋಟುಗಳನ್ನು ತೆಗೆದುಕೊಳ್ಳದಂತೆ ಸಿಬ್ಬಂದಿಗೆ ಅಂತಹ ಯಾವುದೇ ಆದೇಶವನ್ನು ನೀಡಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *